137 ವರ್ಷಗಳಲ್ಲಿ 5ನೇ ಬಾರಿ ಎಐಸಿಸಿ ಚುನಾವಣೆ: ಕರ್ನಾಟಕ, ರಾಜಸ್ಥಾನ ಬಿಟ್ಟು ಉಳಿದ ರಾಜ್ಯಗಳಲ್ಲಿ ಖರ್ಗೆ ಪ್ರವಾಸ!
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಂದು ವೇಳೆ ಖರ್ಗೆ ಆಯ್ಕೆಯಾದರೆ ಕರ್ನಾಟಕದಿಂದ ಆಯ್ಕೆಯಾದ ಎರಡನೇ ವ್ಯಕ್ತಿಯಾಗುತ್ತಾರೆ. 1969 ರಲ್ಲಿ ಎಸ್. ನಿಜಲಿಂಗಪ್ಪ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.
Published: 15th October 2022 12:32 PM | Last Updated: 15th October 2022 01:03 PM | A+A A-

ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಕರ್ನಾಟಕದಿಂದ ಸ್ಪರ್ಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಭುವನೇಶ್ವರದಲ್ಲಿ ತಮ್ಮ ರಾಜ್ಯಗಳ ಪ್ರವಾಸದ ಕೊನೆಯ ಹಂತವನ್ನು ಪೂರ್ಣಗೊಳಿಸಿದ್ದಾರೆ.
ಒಡಿಶಾ, ತಮಿಳುನಾಡು ಮತ್ತು ಪುದುಚೇರಿಯ ಪಿಸಿಸಿ ನಾಯಕರನ್ನು ಭೇಟಿ ಮಾಡಿದರು. ಶಶಿ ತರೂರ್ ಅವರ ತವರು ರಾಜ್ಯ ಕೇರಳಕ್ಕೂ ಭೇಟಿ ನೀಡಿದ್ದರು. ಈ ವೇಳೆ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಖರ್ಗೆ ಅವರ ಜೊತೆಗಿದ್ದರು.
ಬೇರೆ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಚೆನ್ನಿತ್ತಲ ಖರ್ಗೆ ಜತೆಗಿದ್ದರು. ಬ್ಲಾಕ್ ಅಧ್ಯಕ್ಷರಾಗಿ ಆರಂಭಗೊಂಡ ಖರ್ಗೆ, ಜಿಲ್ಲಾ, ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಒಂಬತ್ತು ಬಾರಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಅವರು ರೈಲ್ವೆ ಮಂತ್ರಿ ಮತ್ತು ಕೇಂದ್ರ ಕಾರ್ಮಿಕ ಸಚಿವರೂ ಆಗಿದ್ದರು.
ರಾಜಸ್ಥಾನ ಮತ್ತು ಕರ್ನಾಟಕ ಹೊರತುಪಡಿಸಿ ಬಹುತೇಕ ಎಲ್ಲ ಪಿಸಿಸಿ ನಾಯಕರು ಮತ್ತು ಪ್ರತಿನಿಧಿಗಳನ್ನು ಉದ್ದೇಶಿಸಿ ಖರ್ಗೆ ಮಾತನಾಡಿದ್ದಾರೆ. ಶುಕ್ರವಾರದಂದು ಪಕ್ಷದ ಉದಯಪುರ ಚಿಂತನ ಶಿಬಿರದಲ್ಲಿ ಕೈಗೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಹೇಳಿದರು. ಕಳೆದ ಕೆಲವು ದಿನಗಳಿಂದ ಖರ್ಗೆ ಅವರು ಈಶಾನ್ಯ ರಾಜ್ಯಗಳು, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ನಾಯಕರನ್ನು ಭೇಟಿ ಮಾಡಿದ್ದಾರೆ.
“ಅಕ್ಟೋಬರ್ 17 ರಂದು ಚುನಾವಣೆ ಇದೆ ಮತ್ತು ನಾವೆಲ್ಲರೂ ನಮ್ಮ ಮತವನ್ನು ಚಲಾಯಿಸುತ್ತೇವೆ. ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಹಾಗಾಗಿಯೇ ನಮ್ಮ ನಾಯಕನನ್ನು ಆಯ್ಕೆ ಮಾಡಲು ಚುನಾವಣೆ ನಡೆಸುತ್ತಿದ್ದೇವೆ. ಖರ್ಗೆ ಅವರ ಗೆಲುವು ಖಚಿತ , ಅವರು ದೊಡ್ಡ ಅಂತರದಿಂದ ಗೆಲ್ಲಲು ನಾವು ಇಷ್ಟಪಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಂದು ವೇಳೆ ಖರ್ಗೆ ಆಯ್ಕೆಯಾದರೆ ಕರ್ನಾಟಕದಿಂದ ಆಯ್ಕೆಯಾದ ಎರಡನೇ ವ್ಯಕ್ತಿಯಾಗುತ್ತಾರೆ. 1969 ರಲ್ಲಿ ಎಸ್. ನಿಜಲಿಂಗಪ್ಪ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.
137 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೇವಲ ನಾಲ್ಕು ಚುನಾವಣೆ ನಡೆಸಿದೆ. ಇದು 5ನೇ ಬಾರಿ ನಡೆಯುತ್ತಿರುವ ಚುನಾವಣೆಯಾಗಿದೆ, ಮೊದಲ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಪಟ್ಟಾಭಿ ಸೀತಾರಾಮಯ್ಯ ವಿರುದ್ಧ ಗೆಲುವು ಸಾಧಿಸಿದ್ದರು.
2 ನೇ ಬಾರಿ ಜೆ ಕೃಪಲಾನಿ ವಿರುದ್ಧ ಪಿಡಿ ಟಂಡನ್ ಗೆದ್ದರು. 3 ನೇ ಬಾರಿ ನಡೆದ ಚುನಾವಣೆಯಲ್ಲಿ ಸೀತಾರಾಮ್ ಕೇಸರಿ, ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಸ್ಪರ್ಧಿಸಿದ್ದರು, ಇದರಲ್ಲಿ ಸೀತಾರಾಮ್ ಕೇಸರಿ ಗೆದ್ದರು 4 ನೇ ಬಾರಿ ನಡೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಜಿತೇಂದ್ರ ಪ್ರಸಾದ್ ಸ್ಪರ್ಧಿಸಿದ್ದರು, ಅದರಲ್ಲಿ ಸೋನಿಯಾ ಗೆಲುವು ಸಾಧಿಸಿದ್ದರು.