ಸಿಎಂ ಕಾರ್ಯವೈಖರಿಗೆ ಕೇಂದ್ರದ ಬಿಜೆಪಿ ನಾಯಕರು ಖುಷ್; ಮುಂಬರುವ ಚುನಾವಣೆಯಲ್ಲಿ ಬೊಮ್ಮಾಯಿ ಅವರೇ ಸಿಎಂ ಅಭ್ಯರ್ಥಿ

ಬಿಜೆಪಿಯ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾರ್ಯವೈಖರಿಯಿಂದ ಸಂತಸಗೊಂಡಿದೆ ಮತ್ತು ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾನುವಾರ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ - ಬಿಎಸ್ ಯಡಿಯೂರಪ್ಪ
ಬಸವರಾಜ ಬೊಮ್ಮಾಯಿ - ಬಿಎಸ್ ಯಡಿಯೂರಪ್ಪ

ಬೆಂಗಳೂರು: ಬಿಜೆಪಿಯ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾರ್ಯವೈಖರಿಯಿಂದ ಸಂತಸಗೊಂಡಿದೆ ಮತ್ತು ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾನುವಾರ ಹೇಳಿದ್ದಾರೆ.

'ರಾಜ್ಯದಲ್ಲಿ ಬೊಮ್ಮಾಯಿ ಅವರು ಮಾಡುತ್ತಿರುವ ಕೆಲಸದಿಂದ ಕೇಂದ್ರದ ಬಿಜೆಪಿ ನಾಯಕರಿಗೆ ತುಂಬಾ ಸಂತೋಷವಾಗಿದೆ' ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು ಸುದ್ದಿಸಂಸ್ಥೆ  ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿ, ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರ ಪಾತ್ರ, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ನಿರೀಕ್ಷೆಗಳು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದ ಮೌಲ್ಯಮಾಪನದ ಕುರಿತು ಸಿಂಗ್ ಅವರನ್ನು ಕೇಳಲಾಯಿತು.

ಮೋದಿ ಹಾಗೂ ಬೊಮ್ಮಾಯಿ ಸರ್ಕಾರದ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಎತ್ತಿ ಹಿಡಿದ ಅವರು, ಕರ್ನಾಟಕದಲ್ಲಿನ ಒಟ್ಟು 224 ಸ್ಥಾನಗಳಲ್ಲಿ  ಬಿಜೆಪಿ 150 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ತನ್ನ ಗುರಿಯನ್ನು ಮೀರಿ 'ಇತಿಹಾಸ' ಸೃಷ್ಟಿಸುತ್ತದೆ ಎಂದು ಹೇಳಿದರು.

ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಹಾಗೂ ಸದ್ಯ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಆಡಳಿತ ಪಕ್ಷವು ಚುನಾವಣೆಯನ್ನು ಎದುರಿಸಲಿದೆ. ಬೊಮ್ಮಾಯಿ ಈಗ ಮುಖ್ಯಮಂತ್ರಿ. ಅವರೇ ಮುಖ್ಯಮಂತ್ರಿ ಅಭ್ಯರ್ಥಿ. ಯಾವುದೇ ಅನುಮಾನವಿಲ್ಲ ಎಂದು ಸಿಂಗ್ ಹೇಳಿದರು.

ಕಳೆದ ವರ್ಷ ಜುಲೈನಲ್ಲಿ ಯಡಿಯೂರಪ್ಪ ಅವರ ಬದಲಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೊಮ್ಮಾಯಿ ಅವರು ಸರಳ, ನಿಷ್ಠುರ ಮತ್ತು ಸಭ್ಯ ವ್ಯಕ್ತಿ ಎಂದು ಬಣ್ಣಿಸಿದ ಅವರು, ಸಾಮಾನ್ಯ ವ್ಯಕ್ತಿಯಾಗಿದ್ದವರು ಮುಖ್ಯಮಂತ್ರಿಯಾದರು ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಯವರು ಕೂಡ ತಮ್ಮಂತೆಯೇ ಸಾಮಾನ್ಯ ವ್ಯಕ್ತಿ ಎಂದು ಕರ್ನಾಟಕದ ಜನರು ಭಾವಿಸುತ್ತಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಕರ್ನಾಟಕದಲ್ಲಿ ಎತ್ತರದ ನಾಯಕ ಮತ್ತು ಬಿಜೆಪಿ ಅವರ 'ಮಾರ್ಗದರ್ಶನ'ವನ್ನು ಹೊಂದಿದೆ. ಯಡಿಯೂರಪ್ಪ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಮತ್ತು 150 ಸ್ಥಾನಗಳನ್ನು ಗೆಲ್ಲಲು ಮತ ಕೇಳುತ್ತಿದ್ದಾರೆ. 'ಇದು ದೊಡ್ಡ ವಿಷಯ' ಎಂದು ಸಿಂಗ್ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಾಂಪ್ರದಾಯಿಕ ಭದ್ರಕೋಟೆಗಳಾದ ಹಳೇ ಮೈಸೂರು ಪ್ರದೇಶದಲ್ಲಿ (ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ) ಪಕ್ಷವು ತನ್ನ ನೆಲೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ನಮ್ಮ ಶಕ್ತಿ ಗಣನೀಯವಾಗಿ ಆ ಪ್ರದೇಶದಲ್ಲಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

'ನಾವು ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಚಮತ್ಕಾರ (ಪವಾಡ) ಮಾಡಲಿದ್ದೇವೆ. ಹಳೇ ಮೈಸೂರು ಮತ್ತು 'ಕಲ್ಯಾಣ ಕರ್ನಾಟಕ' ಪ್ರದೇಶದಲ್ಲಿನ (ಬೀದರ್, ರಾಯಚೂರು ಮತ್ತು ಕಲಬುರಗಿ) ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅನೇಕ ನಾಯಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಏಕೆಂದರೆ, ಬಿಜೆಪಿಯೇ ಸರ್ಕಾರ ರಚಿಸಲಿದೆ ಮತ್ತು ಬಿಜೆಪಿಯೊಂದಿಗೆ ಭವಿಷ್ಯವಿದೆ ಎಂಬುದನ್ನು ಅವರು ಅರಿತಿದ್ದಾರೆ' ಎಂದು ಅವರು ಹೇಳಿದ್ದಾರೆ.

ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಇದೇ ರೀತಿ ಹೇಳಿದ್ದರು. ಆದರೆ, ಅವರು ನಾಶವಾಗಿದ್ದಾರೆ. ಗೋವಾದಲ್ಲಿ 11 ಕಾಂಗ್ರೆಸ್ ಶಾಸಕರ ಪೈಕಿ ಎಂಟು ಮಂದಿ ಪಕ್ಷ ತೊರೆದಿದ್ದಾರೆ. 'ಕಾಂಗ್ರೆಸ್ ತೊರೆಯಿರಿ ಅಭಿಯಾನವು ದೇಶದಲ್ಲಿ ನಡೆಯುತ್ತಿದೆ ಎಂದ ಅವರು ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಗೆಲ್ಲುವ ಕಾಂಗ್ರೆಸ್ ಗುರಿಯನ್ನು ಲೇವಡಿ ಮಾಡಿದರು.

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಯನ್ನು 'ಫ್ಲಾಪ್ ಯಾತ್ರೆ' ಎಂದು ಬಣ್ಣಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com