ಸಾರ್ವಜನಿಕವಾಗಿ ಮಹಿಳೆಗೆ ಕಪಾಳ ಮೋಕ್ಷ! ವಿಡಿಯೋ ವೈರಲ್, ಸಚಿವ ವಿ. ಸೋಮಣ್ಣ ವಿರುದ್ಧ ಭುಗಿಲೆದ್ದ ಆಕ್ರೋಶ

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಿಳೆಗೆ ಕಪಾಳ ಮೋಕ್ಷ ಮಾಡಿದ ಸೋಮಣ್ಣ
ಮಹಿಳೆಗೆ ಕಪಾಳ ಮೋಕ್ಷ ಮಾಡಿದ ಸೋಮಣ್ಣ

ಮೈಸೂರು: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಮಹಿಳೆ ಆರೋಪಿಸಿದಾಗ ತಾಳ್ಮೆ ಕಳೆದುಕೊಂಡ ಸಚಿವರು, ಕಪಾಳ ಮೋಕ್ಷ ಮಾಡಿದ್ದಾರೆ. ನಿನ್ನೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಚಿವರು ಭಾಗವಹಿಸಿದ್ದರು. ಈಗಾಗಲೇ ನಿವೇಶನ ಹೊಂದಿರುವ ಕುಟುಂಬಗಳನ್ನು ಅಧಿಕಾರಿಗಳು ಆಯ್ಕೆ ಮಾಡಿದ್ದು, ತನಗೆ ನ್ಯಾಯ ಸಿಗಲಿಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ಮಹಿಳೆ ಆರೋಪಿಸಿದ್ದಾರೆ.  

ಗಡಿ ಜಿಲ್ಲೆಗಳಲ್ಲಿ ಹಗಲಿರುಳು ಪ್ರವಾಸ ಕೈಗೊಂಡಿದ್ದ ಸೋಮಣ್ಣ ಅವರ  ಬಳಿಗೆ ಬಂದ ಕೆಂಪಮ್ಮ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಸಂಘಟನೆ ಯಾತ್ರೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಗುಂಡ್ಲುಪೇಟೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಚಿವರ ಬೆಂಬಲಿಗರು ಮಹಿಳೆಯರಿಗೆ ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಸಚಿವರು ಕಪಾಳಮೋಕ್ಷ ಮಾಡಿಲ್ಲ, ಮನೆ ನಿರ್ಮಾಣಕ್ಕೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕೆಂಪಮ್ಮ ಹೇಳಿದ್ದಾರೆ. ನೆರವು ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸುವ ಹಾಗೂ ಹೊಸ ಮನೆಯಲ್ಲಿ ಅವರ ಫೋಟೋ ಇಡುವುದಾಗಿ ಕೆಂಪಮ್ಮ ವಿಡಿಯೋವೊಂದರಲ್ಲಿ ಹೇಳಿದ್ದಾರೆ. 

ಸಚಿವ ವಿ.ಸೋಮಣ್ಣ ಅವರ ವರ್ತನೆ ಹಾಗೂ ಮಹಿಳೆಯಿಗೆ ಕಪಾಳಮೋಕ್ಷ ಮಾಡಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಖಂಡಿಸಿದ್ದಾರೆ. ಇಂತಹ ಘಟನೆಗಳು ರಾಜಕಾರಣಿಗಳು ಹಾಗೂ ಅವರ ಪಕ್ಷದ ವರ್ಚಸ್ಸನ್ನು ಮತ್ತಷ್ಟು ಕೆಡಿಸಲಿದ್ದು, ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಜನರು ತಾಳ್ಮೆಯಿಂದಿರಬೇಕು ಮತ್ತು ಮಹಿಳೆಗೆ ಕಪಾಳ ಮೋಕ್ಷ ಅಹಂಕಾರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಪ್ರವೃತ್ತಿ ಒಳ್ಳೆಯದಲ್ಲ, ವಿ. ಸೋಮಣ್ಣ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. 

ಅರ್ಹ ಫಲಾನುಭವಿಗಳ ಆಯ್ಕೆಯಲ್ಲಿ ಲೋಪ ಎಸಗಿರುವ ಬಗ್ಗೆ ದೂರು ನೀಡಲು ತೆರಳಿದ್ದ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಹಾಗೂ ಸಚಿವರ ದರ್ಪವನ್ನು ಜೆಡಿಎಸ್ ವಕ್ತಾರ ಎನ್.ರಾಜುಗೌಡ ಖಂಡಿಸಿದ್ದಾರೆ. ಬಿಜೆಪಿ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದ ಅವರು, ಈ ಘಟನೆಯು ಮಹಿಳೆಯರಿಗೆ ಮಾಡಿದ ಘೋರ ಅಪಮಾನವಾಗಿದ್ದು, ಸುಸಂಸ್ಕೃತ ಸಮಾಜ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com