ಸಿದ್ದರಾಮಯ್ಯ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ: ಪ್ರಹ್ಲಾದ್ ಜೋಶಿ ವ್ಯಂಗ್ಯ

ವರುಣಾದಲ್ಲಿ ಸೋಲುತ್ತೇನೆ ಎಂಬ ಭಯದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಳಗಾವಿ: ವರುಣಾದಲ್ಲಿ ಸೋಲುತ್ತೇನೆ ಎಂಬ ಭಯದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ವ್ಯಂಗ್ಯವಾಡಿದ್ದಾರೆ.

ಧರ್ಮನಾಥ ಭವನದಲ್ಲಿ ಶುಕ್ರವಾರ ಅಭ್ಯರ್ಥಿಗಳ ಆಯ್ಕೆ ಕುರಿತು ಕರೆದಿದ್ದ ಚುನಾವಣಾ ಸಿದ್ಧತೆ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರಿಗೆ ಇನ್ನೂ ಕ್ಷೇತ್ರ ಸಿಕ್ಕಿಲ್ಲ. ವರುಣಾದಲ್ಲಿ ಸೋಲುತ್ತೇನೆ ಎನ್ನುವ ಭಯದಿಂದ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಲು ಹೊರಟಿದ್ದಾರೆ. ಕೋಲಾರ ಸೇರಿದಂತೆ ವಿವಿಧೆಡೆ ಕ್ಷೇತ್ರ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯನವರು 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿ ಎಂದು ಹೇಳಿದರು.

ವರುಣಾದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದು, ತಂದೆಗಾಗಿ ಸ್ಥಾನ ಬಿಟ್ಟುಕೊಡುವ ಮೂಲಕ ಪುತ್ರ ಡಾ.ಯತೀಂದ್ರ ತ್ಯಾಗ ಮಾಡಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿಗಳು ಸೋಲುವ ಭೀತಿಯಲ್ಲಿದ್ದಾರೆ, ಅದಕ್ಕಾಗಿಯೇ ಅವರು ಸ್ಪರ್ಧಿಸಲು ಮತ್ತೊಂದು ಸುರಕ್ಷಿತ ಕ್ಷೇತ್ರವನ್ನು ಹುಡುಕುತ್ತಿದ್ದಾರೆ, ಇದು ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕಾಂಗ್ರೆಸ್‌ನಂತೆ ಒಂದು ಕುಟುಂಬದ ಪಕ್ಷವಲ್ಲ. "ನಾವು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ನಿರ್ಧರಿಸುತ್ತೇವೆ. ಆಕಾಂಕ್ಷಿಗಳು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆಯಲು ಸಭೆ ನಡೆಸುತ್ತಿದ್ದೇವೆ. ಅವರಿಂದ ರಹಸ್ಯ ಮತಗಳನ್ನು ಕೂಡ ಪಡೆಯುತ್ತಿದ್ದೇವೆ. ವಿಧಾನಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳಿಗೆ ಬಿಜೆಪಿ ಉಮೇದುವಾರಿಕೆ ನೀಡುತ್ತದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಬಹುಮತ ಪಡೆಯಲಿದೆ ಎಂದು ತಿಳಿಸಿದರು.

"ಗ್ಯಾಸ್ ಸಿಲಿಂಡರ್ ಮತ್ತು ಮಹಿಳಾ ಪ್ರಧಾನ ಕುಟುಂಬಗಳಿಗೆ ಆರ್ಥಿಕ ಸಹಾಯದಂತಹ ಸುಳ್ಳುಗಳನ್ನು ನೀಡುವ ಮತ್ತು ಪ್ರಚಾರ ಮಾಡುವಲ್ಲಿ ಕಾಂಗ್ರೆಸ್ ಎಕ್ಸ್ ಪರ್ಟ್. ಒಂದು ಕುಟುಂಬಕ್ಕೆ ವರ್ಷಕ್ಕೆ 78 ಸಾವಿರ ರೂ. ನೀಡುವ ಬಗ್ಗೆ ಗ್ಯಾರಂಟಿ ಕಾರ್ಡ್‌ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಹೇಳುವುದನ್ನು ಮಾಡುವುದೇ ಇಲ್ಲ. ರಾಜಸ್ಥಾನದಲ್ಲಿಕೊಟ್ಟ ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ. ಕಳೆದ ಬಾರಿ ಕರ್ನಾಟಕದಲ್ಲಿನೀಡಿದ ಭರವಸೆಯನ್ನೂ ಈಡೇರಿಸಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರಕಾರ ಅಭಿವೃದ್ಧಿ ಮಾಡುತ್ತಿದೆ. ದೇಶದಲ್ಲೇ ಕಾಂಗ್ರೆಸ್‌ ರಿಜೆಕ್ಟ್ ಪಾರ್ಟಿ. ಮುಂಬರುವ ರಾಜಸ್ಥಾನ, ಛತ್ತೀಸಗಡ ರಾಜ್ಯದಲ್ಲೂ ಕಾಂಗ್ರೆಸ್‌ ಸೋಲುತ್ತದೆ ಎಂದು ಹೇಳಿದರು.

ಟಿಕೆಟ್ ನೀಡುವುದಾಗಿ ಹೇಳಿ ಬಿಜೆಪಿ ಶಾಸಕರಿಗೆ ಕಾಂಗ್ರೆಸ್'ಗೆ ಸೇರ್ಪಡೆಗೊಳ್ಳುವಂತೆ ಡಿಕೆ.ಶಿವಕುಮಾರ್ ಅವರು ಆಫರ್ ನೀಡುತ್ತಿದ್ದಾರೆಂಬ ಮಾತುಗಳ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ದೇಶದ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದರಿಂದ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರಿಂದ ಅವರು ಇಂತಹ ಕೃತ್ಯಗಳಿಗೆ ಕೈ ಹಾಕಿದ್ದಾರೆ ಎಂದರು.

ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವಿನ ಮಾತಿನ ಸಮರ ಕುರಿತು ಮಾತನಾಡಿ, ಬಹಿರಂಗ ಹೇಳಿಕೆ ನೀಡದಂತೆ ಇಬ್ಬರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ಬಿಜೆಪಿ ಹೈಕಮಾಂಡ್ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಪರಿಸ್ಥಿತಿಯನ್ನು ಸರಿಪಡಿಸಲಿದೆ. ಏಪ್ರಿಲ್ 6 ಅಥವಾ 7 ರಂದು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com