ಕೆಆರ್ ಪೇಟೆಯಿಂದ ಚುನಾವಣೆಗೆ ಸ್ಪರ್ಧಿಸಲು ನನಗೆ ಯಾವುದೇ ಭಯವಿಲ್ಲ: ಸಚಿವ ನಾರಾಯಣಗೌಡ
ಕೆ.ಆರ್.ಪೇಟೆಯಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜನ ಬೆಂಬಲ ನೀಡಿದ್ದೇ ಆದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಣಕ್ಕಿಯಲಿದ್ದಾರೆಂಬ ಊಹಾಪೋಹಗಳಿಗೆ ಸಚಿವ ನಾರಾಯಣ ಗೌಡ ಅವರು ಶನಿವಾರ ತೆರೆ ಎಳೆದಿದ್ದಾರೆ.
Published: 02nd April 2023 10:54 AM | Last Updated: 03rd April 2023 03:39 PM | A+A A-

ಸಚಿವ ನಾರಾಯಣ ಗೌಡ
ಮೈಸೂರು: ಕೆ.ಆರ್.ಪೇಟೆಯಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜನ ಬೆಂಬಲ ನೀಡಿದ್ದೇ ಆದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಣಕ್ಕಿಯಲಿದ್ದಾರೆಂಬ ಊಹಾಪೋಹಗಳಿಗೆ ಸಚಿವ ನಾರಾಯಣ ಗೌಡ ಅವರು ಶನಿವಾರ ತೆರೆ ಎಳೆದಿದ್ದಾರೆ.
ಕೆಆರ್ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿ 3-4 ಸ್ಥಾನ ಗೆಲ್ಲಲಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಂಡ್ಯ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವುದಾಗಿ ಘೋಷಿಸಿದ ಅವರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡಿದ್ದು, ಪುತ್ರ ವಿಜಯೇಂದ್ರ ಅವರೊಂದಿಗೆ ಕೆಆರ್ ಪೇಟೆಗೆ ಭೇಟಿ ನೀಡಲಿದ್ದಾರೆ.
ಕೆಆರ್ ಪೇಟೆಯಿಂದ ಚುನಾವಣೆಗೆ ಸ್ಪರ್ಧಿಸಲು ನನಗೆ ಯಾವುದೇ ಭಯವಿಲ್ಲ. ಈ ಕುರಿತ ತೀರ್ಮಾನವನ್ನು ಜನರಿಗೇ ಬಿಡುತ್ತೇನೆ. ನೀವು ನನ್ನ ಮೇಲೆ ವಿಶ್ವಾಸವಿಟ್ಟರೆ ನಾನು ಸ್ಪರ್ಧಿಸುತ್ತೇನೆ. ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ. ರೈತರು ಮತ್ತು ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲು ನೀರಾವರಿ ಯೋಜನೆಗಳನ್ನು ತರುವ 1,900 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದ್ದೇನೆಂದು ಹೇಳಿದರು.
ಇದೇ ವೇಳೆ ಕೋವಿಡ್ ನಿರ್ವಹಣೆಗೆ ನಿರಂತರ ಬೆಂಬಲ ಹಾಗೂ ನಾಯಕತ್ವಕ್ಕಾಗಿ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿಯವರನ್ನು ನಾರಾಯಣಗೌಡ ಅವರು ಕೊಂಡಾಡಿದರು. ವಿಪಕ್ಷಗಳು ವಿನಾಕಾರಣ ಆರೋಪ ಮಾಡುವ ಬದಲು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ ಕೇಳಬೇಕು ಎಂದರು.
ಇದನ್ನೂ ಓದಿ: ಯಾರನ್ನು ಬೇಕಾದರೂ ಮಾಡಿ, ಮಂಡ್ಯ ಉಸ್ತುವಾರಿ ನನಗಂತೂ ಬೇಡ; ಕೆ.ಸಿ ನಾರಾಯಣಗೌಡ ಗರಂ
ಬಳಿಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 2018 ರ ಚುನಾವಣೆಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಗೆದ್ದರೂ 14 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ವಿಫಲರಾಗಿದ್ದರು ಆರೋಪಿಸಿದರು.
ಅಭಿವೃದ್ಧಿಗೆ ಅನುದಾನ ನೀಡಿದ್ದರೆ ನಾನು ಜೆಡಿಎಸ್ ಬಿಡುತ್ತಿರಲಿಲ್ಲ. ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಹಾಗೂ ಭವಿಷ್ಯದ ನಾಯಕತ್ವವನ್ನು ಬೆಳೆಸಲು ಜೆಡಿಎಸ್ ನಾಯಕತ್ವ ಅವಕಾಶ ನೀಡದ ಕಾರಣ ಉಸಿರುಗಟ್ಟಿಸುವ ವಾತಾವರಣವನ್ನು ವಿರೋಧಿಸಿ ಬಿಜೆಪಿಗೆ ಸೇರ್ಪಡೆಗೊಂಡೆ ಎಂದು ಹೇಳಿದರು.
ಒಬ್ಬರನ್ನು ಮುಗಿಸಲು ಮತ್ತೊಬ್ಬರನ್ನು ಹುಟ್ಟು ಹಾಕುವುದೇ ಜೆಡಿಎಸ್ ವರಿಷ್ಠರ ಕೆಲಸ. ನಾನು ಆ ಪಕ್ಷದಲ್ಲಿದ್ದೆ. ಅವರ ಮನೆ ಅನ್ನ ತಿಂದಿದ್ದೇನೆ. ಅವರನ್ನು ಟೀಕೆ ಮಾಡೊಲ್ಲ. ಆದರೆ, ನನ್ನ ನೋವನ್ನು ಹೇಳುತ್ತಿದ್ದೇನೆ ಅಷ್ಟೆ. ಎಚ್.ಡಿ.ದೇವೇಗೌಡರ ಕುಟುಂಬ ಯಾರನ್ನು ತಾನೆ ಬೆಳೆಯಲು ಬಿಟ್ಟಿದೆ. ಜೆಡಿಎಸ್ ಪಕ್ಷದಲ್ಲಿ ಶೇ.99 ರಷ್ಟು ನಾಯಕರು ಭಯದ ವಾತಾವರಣದಲ್ಲಿದ್ದಾರೆ. ಈ ಬಗ್ಗೆ ಮೇಲುಕೋಟೆ ಶಾಸಕ ಪುಟ್ಟರಾಜುರವರ ಅಂತರಾಳ ಕೇಳಿ ಅದರ ಬಗ್ಗೆ ಹೇಳ್ತಾರೆ. ಆತ್ಮಪೂರ್ವಕವಾಗಿ ಯಾರು ಜೆಡಿಎಸ್‌ನಲ್ಲಿ ಇಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷಕ್ಕೆ ನನ್ನ ಕೊಡುಗೆ ಏನೂ ಇರಲಿಲ್ಲ. ಆದರೆ, ಮಾಜಿ ಸ್ಪೀಕರ್ ಕೃಷ್ಣರನ್ನು ಮಟ್ಟ ಹಾಕಲು ನನ್ನನ್ನು ಹುಟ್ಟು ಹಾಕಿದರು. 40 ವರ್ಷಗಳ ಕಾಲ ಪಕ್ಷ ಕಟ್ಟಿದ ಕೃಷ್ಣ ಅವರಿಗೆ ಟಿಕೆಚ್ ತಪ್ಪಿಸಿ ನನಗೆ ಟಿಕೆಚ್ ನೀಡಿದರು. ನನ್ನನ್ನು ಮುಗಿಸಲು ಮತ್ತೊಬ್ಬರನ್ನು ಹುಟ್ಟು ಹಾಕಿದರು ಎಂದು ದೂರಿದರು.
ಇದನ್ನೂ ಓದಿ: ಜೆಡಿಎಸ್ ಮತ್ತೊಂದು ವಿಕೆಟ್ ಪತನ: ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ರಾಜಿನಾಮೆ
ಕ್ಷೇತ್ರದಲ್ಲಿ ನಾನು ಜಲ್ಲಿ, ಕಲ್ಲು ಹೊಡೆಯುತ್ತಿಲ್ಲ. ಇವರು ಜಲ್ಲಿ ಕಲ್ಲು ಹೊಡೆಯುತ್ತಿರುವುದರಿಂದ ನಾವು ಮಾಡಿಸಿದ ರಸ್ತೆಗಳನ್ನು ಕಿತ್ತು ಹಾಕಿಕೊಂಡು ಬರ್ತಿದ್ದಾರೆ. ಎಲ್ಲೆಡೆ ನಾನು ಅದನ್ನ ಹೇಳಿಕೊಂಡು ಬರಬೇಕಾ.? ಇನ್ಮೇಲೆ ಶುರುವಾಗುತ್ತೆ ಎಂದು ಚಿಟುಕೆ ಹೊಡೆದು ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ವಿರುದ್ಧ ಗುಡುಗಿದರು.
ವಿಪಕ್ಷದವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಬಾಂಬೆ ಸುಳ್ಳ, ಬಾಂಬೆ ಕಳ್ಳ ಅಂತಾರೆ. ನಾನು ನಯಾಪೈಸೆ ಕಳ್ಳತನ ಮಾಡಿದ್ದರೆ ಒಂದೆ ಒಂದು ದಾಖಲೆ ಕೊಡಲಿ. ಇವರ ಮನೆಗೆ ನುಗ್ಗಿ ಏನಾದ್ರು ಮಾಡಿದ್ರೆ ಹೇಳಲಿ.
ಕೋವಿಡ್ ಕಾಲದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಪ್ರಾಣದ ಹಂಗನ್ನು ತೊರೆದು ಜನ ಸಾಮಾನ್ಯರ ಜೀವವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.