ಸಂಸದ ಸ್ಥಾನದಿಂದ ಅನರ್ಹ: ರಾಹುಲ್ ಗಾಂಧಿ ಕೋಲಾರ ಭೇಟಿ ಮತ್ತೆ ಮುಂದೂಡಿಕೆ

ಕೋಲಾರದಲ್ಲಿ ಏಪ್ರಿಲ್ 10 ರಂದು ನಡೆಯಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದ್ದು, ಇದೀಗ ಏಪ್ರಿಲ್ 16 ರಂದು ಕೋಲಾರಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು: ಕೋಲಾರದಲ್ಲಿ ಏಪ್ರಿಲ್ 10 ರಂದು ನಡೆಯಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದ್ದು, ಇದೀಗ ಏಪ್ರಿಲ್ 16 ರಂದು ಕೋಲಾರಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶನಿವಾರ ತಿಳಿಸಿದ್ದಾರೆ.

2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವು ಸಂಸದ ಸ್ಥಾನದಿಂದ ಅನರ್ಹಗೊಳ್ಳಲು ಕಾರಣವಾದ ಅದೇ ಸ್ಥಳದಲ್ಲಿ ಏಪ್ರಿಲ್ 10 ರಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಯೋಜಿಸಿದ್ದರು ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ, ವಿಧಾನಸಭೆ ಚುನಾವಣೆ ಸಂಬಂಧಿತ ಕೆಲಸಗಳು ಮತ್ತು ಅಭ್ಯರ್ಥಿಗಳ ಆಯ್ಕೆಯಿಂದಾಗಿ ಪಕ್ಷದ ಮುಖಂಡರು ಕೋಲಾರ ಭೇಟಿಯನ್ನು ಒಂದು ವಾರ ವಿಸ್ತರಿಸುವಂತೆ ಮನವಿ ಮಾಡಿದರು.

"ಸಾರ್ವಜನಿಕ ಸಭೆಯನ್ನು ಒಂದು ವಾರ ಮುಂದೂಡುವಂತೆ ನಾವು ರಾಹುಲ್ ಗಾಂಧಿಗೆ ಮನವಿ ಮಾಡಿದ್ದೇವೆ ಮತ್ತು ಅವರು ಒಪ್ಪಿಗೆ ನೀಡಿದ್ದಾರೆ. ಏಪ್ರಿಲ್ 16 ರಂದು ಕೋಲಾರದಲ್ಲಿ 'ಜೈ ಭಾರತ್' ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಮತ್ತು ಇತರ ಎಲ್ಲಾ ನಾಯಕರು ಬರುತ್ತಾರೆ" ಎಂದು ಶಿವಕುಮಾರ್ ಹೇಳಿದ್ದಾರೆ.

ಲೋಕಸಭೆಯಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ರಾಹುಲ್ ಗಾಂಧಿಯವರ ಅನರ್ಹತೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಏಳು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದು ಮಾಡಿರುವುದು ಇಡೀ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ರಾಹುಲ್ ಗಾಂಧಿಯವರ ಕಾರ್ಯಕ್ರಮವನ್ನು ಈ ಹಿಂದೆ ಏಪ್ರಿಲ್ 5 ರಂದು ಯೋಜಿಸಲಾಗಿತ್ತು. ಅದನ್ನು ಏಪ್ರಿಲ್ 6ಕ್ಕೆ ಬದಲಾಯಿಸಲಾಯಿತು. ನಂತರ ಅದನ್ನು ಮತ್ತೆ ಏಪ್ರಿಲ್ 10 ರಂದು ಯೋಜಿಸಲಾಗಿತ್ತು. ಇದೀಗ ಏಪ್ರಿಲ್ 16ಕ್ಕೆ ಮುಂದೂಡಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com