ಮಲ್ಲಿಕಾರ್ಜುನ ಖರ್ಗೆ, ಡಿಕೆಶಿವಕುಮಾರ್
ಮಲ್ಲಿಕಾರ್ಜುನ ಖರ್ಗೆ, ಡಿಕೆಶಿವಕುಮಾರ್

ಸಿಎಂ ರೇಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ತಂದ ಡಿಕೆಶಿ, ಚರ್ಚೆಗೆ ಗ್ರಾಸ!

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿಯ ಮಾತುಗಳು ಕೇಳಿಬರುತ್ತಿರುವಂತೆಯೇ, ಇದೀಗ ಡಿಕೆಶಿ ಸಿಎಂ ರೇಸ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತರುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರು/ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿಯ ಮಾತುಗಳು ಕೇಳಿಬರುತ್ತಿರುವಂತೆಯೇ, ಇದೀಗ ಡಿಕೆಶಿ ಸಿಎಂ ರೇಸ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತರುವ ಪ್ರಯತ್ನ ಮಾಡಿದ್ದಾರೆ. ಇದು ಪಕ್ಷದ ವಲಯದಲ್ಲಿ ಕಣ್ಣು ಕೆಂಪಾಗುವಂತೆ ಮಾಡಿದೆ. 

ಖರ್ಗೆ ಬೆಂಬಲಿಸುವ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಪಕ್ಷದೊಳಗೆ 'ದಲಿತ ಸಿಎಂ' ಮತ್ತು 'ಸ್ಥಳೀಯ ವರ್ಸಸ್ ವಲಸಿಗರು' ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕುವ ಮೂಲಕ ಸಿದ್ದರಾಮಯ್ಯ ಅವರ ಭವಿಷ್ಯಕ್ಕೆ ಹಳ್ಳ ತೋಡುವ ಯತ್ನವಾಗಿದೆ ಎಂದು ಪಕ್ಷದವರೇ ಹೇಳುತ್ತಿದ್ದಾರೆ.

ಒಂದು ವೇಳೆ ಖರ್ಗೆ ಸಿಎಂ ಆಗುವುದಾದರೆ  ಸ್ಪರ್ಧೆಯಿಂದ ಹಿಂದೆ ಸರಿಯುತ್ತೀರಾ ಎಂಬ ಪ್ರಶ್ನೆಗೆ ಶಿವಕುಮಾರ್ ನೀಡಿದ ಉತ್ತರದಿಂದ ಈ ಎಲ್ಲಾ ಚರ್ಚೆಗಳು ಆರಂಭವಾಗಿವೆ. ಖರ್ಗೆ ಅವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಅವರು ರಾಜ್ಯ ಮತ್ತು ದೇಶಕ್ಕೆ ಆಸ್ತಿ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ, ಅವರು ನನಗಿಂತ 20 ವರ್ಷ ಹಿರಿಯರು, ಅವರ ಆಶಯಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಡಿಕೆಶಿ ಹೇಳಿದರು. ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆಶಿ, ಹಿರಿಯವರಾಗಿರುವ ಖರ್ಗೆ ಅವರನ್ನು ಬೆಂಬಲಿಸದಿದ್ದರೆ ನಾವು ಮನುಷ್ಯರೇ? ನಾವು ಮುಖ್ಯವಲ್ಲಾ, ಪಕ್ಷ ಅಧಿಕಾರಕ್ಕೆ ಬರುವುದು ಪ್ರಮುಖ ಎಂದರು. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ‘ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ’ ಎಂದು ಹೇಳಿದ್ದಾರೆ. 

ಪಕ್ಷದ ಮೂಲಗಳ ಪ್ರಕಾರ, ಮೂರು ಬಾರಿ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ಸೋತಿರುವ ಖರ್ಗೆ ರಾಜ್ಯ ರಾಜಕೀಯಕ್ಕೆ ಮರಳುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗುತ್ತಿದೆ. ಎಐಸಿಸಿ ಅಧ್ಯಕ್ಷರಾಗಿ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವುದು ಮತ್ತು ಚುನಾವಣೆಗೆ ಸಿದ್ಧಪಡಿಸುವುದು ಮತ್ತು ಇತರರ ನಡುವೆ ವಿಪಕ್ಷಗಳ ಒಗ್ಗಟ್ಟು ಮೂಡಿಸುವಂತಹ ದೊಡ್ಡ ಜವಾಬ್ದಾರಿಯನ್ನು ಖರ್ಗೆ ವಹಿಸಬೇಕಾಗಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳುತ್ತಾರೆ.

ಖರ್ಗೆ ಕುರಿತು ಶಿವಕುಮಾರ್ ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕುರಿತ ಚರ್ಚೆಗೆ ಗ್ರಾಸವಾಗಿದೆ. ಸಮುದಾಯದ ಇತರ ಹಿರಿಯ ನಾಯಕರಾದ ಜಿ ಪರಮೇಶ್ವರ ಮತ್ತು ಕೆ ಎಚ್ ಮುನಿಯಪ್ಪ ಕೂಡಾ ಚುನಾವಣಾ ಕಣದಲ್ಲಿದ್ದಾರೆ. ಕರ್ನಾಟಕದಲ್ಲಿ ಇಲ್ಲಿಯವರೆಗೂ ದಲಿತರು ಯಾರೂ ಕೂಡಾ ಸಿಎಂ ಆಗಿಲ್ಲ. ಕಾಂಗ್ರೆಸ್ ನಲ್ಲಿ ಹಲವು ಸಮರ್ಥ ನಾಯಕರು ಇರುವುದರಿಂದ ಇದನ್ನು ಪರಿಗಣಿಸುವಂತೆ ಕಾಂಗ್ರೆಸ್ ನ ಒಂದು ವರ್ಗದಿಂದ ಒತ್ತಡವಿದೆ. 

ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ನಾನೂ ಇದ್ದೇನೆ ಎಂದು ಇತ್ತೀಚೆಗಷ್ಟೇ ಡಾ.ಜಿ. ಪರಮೇಶ್ವರ್ ಹೇಳಿದ್ದರು. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದರು ಮತ್ತು ಕೆಪಿಸಿಸಿ ಮುಖ್ಯಸ್ಥರಾಗಿ (ಎಂಟು ವರ್ಷಗಳು) ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ಕೆ.ಎಚ್ ಮುನಿಯಪ್ಪ ಪಕ್ಷದ ಹಿರಿಯ ನಾಯಕರಾಗಿದ್ದು, ಕೋಲಾರದಿಂದ ಏಳು ಬಾರಿ ಸಂಸದರಾಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಈಗಾಗಲೇ 2013-18ರ ನಡುವೆ ಒಮ್ಮೆ ಸಿಎಂ ಹುದ್ದೆ ಅಲಂಕರಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ‘ಸ್ಥಳೀಯ’ ಅಥವಾ ‘ಮೂಲ’ ಕಾಂಗ್ರೆಸಿಗರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ದನಿ ಕಾಂಗ್ರೆಸ್‌ನೊಳಗೆ ಕೇಳಿ ಬರುತ್ತಿದೆ. 2006ರಲ್ಲಿ ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com