ಬಿಜೆಪಿ ಕಾಂಗ್ರೆಸ್‌ ನಂತೆ ಸರ್ವಾಧಿಕಾರ ಪಕ್ಷವಲ್ಲ, ಪ್ರಜಾಸತ್ತಾತ್ಮಕ ಪಕ್ಷ, ಚರ್ಚೆ ಮಾಡಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ಭಾರತೀಯ ಜನತಾ ಪಕ್ಷವು ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು ಕಾಂಗ್ರೆಸ್ ಸರ್ವಾಧಿಕಾರ ಪಕ್ಷವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ: ಭಾರತೀಯ ಜನತಾ ಪಕ್ಷವು ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು ಕಾಂಗ್ರೆಸ್ ಸರ್ವಾಧಿಕಾರ ಪಕ್ಷವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಪ್ರಜಾಪ್ರಭುತ್ವದ ಸಿದ್ಧಾಂತ, ನಂಬಿಕೆ, ತತ್ವಗಳ ಮೇಲೆ ನಂಬಿಕೆಯಿಟ್ಟಿರುವ ಭಾರತೀಯ ಜನತಾ ಪಕ್ಷವು ಸರಿಯಾಗಿ ಆಲೋಚಿಸಿ ವಿಸ್ತೃತವಾಗಿ ಚರ್ಚಿಸಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ತರಾತುರಿಯ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ನಿನ್ನೆ ದೆಹಲಿಯ ತಮ್ಮ ನಿವಾಸದಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಬಂಧ ಸಿಎಂ ಬೊಮ್ಮಾಯಿಯವರ ಜೊತೆಗೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಕೆಲ ಹೊತ್ತುಗಳ ಕಾಲ ಮಾತುಕತೆ ನಡೆಸಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಕರ್ನಾಟಕ ವಿಧಾನಸಭೆ ಸದಸ್ಯರು ಈ ವೇಳೆ ಸಭೆಯಲ್ಲಿ ಹಾಜರಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಪಕ್ಷ ಪ್ರಜಾಪ್ರಭುತ್ವ ಪಕ್ಷವಾಗಿದ್ದು, ಕಾಂಗ್ರೆಸ್ ನಂತೆ ಸರ್ವಾಧಿಕಾರ ಪಕ್ಷವಲ್ಲ, ಸರಿಯಾಗಿ ಆಲೋಚಿಸಿ ವಿಸ್ತೃತವಾಗಿ ಚರ್ಚೆ ಮಾಡಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಇಂದು ಮತ್ತೆ ಮತ್ತೊಂದು ಸುತ್ತಿನ ಆಂತರಿಕ ಸಭೆ ನಡೆಯಲಿದೆ. ನಂತರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪನವರು ಹಲವು ಸಭೆಗಳಲ್ಲಿ ಹಾಜರಿದ್ದರು. ಸದ್ಯ ಅವರು ಬೆಂಗಳೂರಿನಲ್ಲಿದ್ದಾರೆ. ಪ್ರತಿಯೊಬ್ಬರ ಪ್ರತಿಯೊಂದು ಸಲಹೆ, ಅಭಿಪ್ರಾಯಗಳನ್ನು ಪಡೆದು ನಂತರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ನಿನ್ನೆ ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ, 170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಲಿದೆ ಎಂದಿದ್ದರು.

ಇದಕ್ಕೂ ಮುನ್ನ ಮೊನ್ನೆ ಭಾನುವಾರ ಬಿಜೆಪಿಯ ಹಿರಿಯ ನಾಯಕರು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದರು. ಕಳೆದ ಶನಿವಾರ ಅಮಿತ್ ಶಾ ಅವರ ನೇತೃತ್ವದಲ್ಲಿ ಜೆ ಪಿ ನಡ್ಡಾ ಅವರ ದೆಹಲಿ ನಿವಾಸದಲ್ಲಿ ಮೊದಲ ಸುತ್ತಿನ ಸಭೆ ನಡೆಸಲಾಗಿತ್ತು.

ಅಮಿತ್ ಶಾ ಅಂತಿಮ ಒಪ್ಪಿಗೆಗೆ ಕಾಯುತ್ತಿರುವ ನಾಯಕರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಪ್ರವಾಸದಲ್ಲಿದ್ದಾರೆ. ಅವರು ದೆಹಲಿಗೆ ಹಿಂತಿರುಗಿದ ನಂತರ ಇಂದು ಸಾಯಂಕಾಲ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಅದರಲ್ಲಿ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದ ನಂತರ ಇಂದು ಸಾಯಂಕಾಲ ಅಥವಾ ನಾಳೆ ಪಟ್ಟಿ ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com