‘ವಂಶೋದ್ಧಾರ‘ ಕುರಿತ ಹೇಳಿಕೆ; ನಟಿ ಶ್ರುತಿ ವಿರುದ್ಧ ಚುನಾವಣಾ ಆಯೋಗ ದೂರು ದಾಖಲು
ಹಿರೇಕೆರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಶ್ರುತಿ ಮಾಡಿದ ಭಾಷಣವು, ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪುಗಳ ನಡುವೆ ದ್ವೇಷ ಮತ್ತು ವೈಮನಸ್ಸು ಭಾವನೆಗಳನ್ನುಂಟು ಮಾಡುವ ಹೇಳಿಕೆಯಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.
Published: 13th April 2023 04:10 PM | Last Updated: 13th April 2023 04:10 PM | A+A A-

ಶೃತಿ
ಹಾವೇರಿ: ಹಿರೇಕೆರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಶ್ರುತಿ ಮಾಡಿದ ಭಾಷಣವು, ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪುಗಳ ನಡುವೆ ದ್ವೇಷ ಮತ್ತು ವೈಮನಸ್ಸು ಭಾವನೆಗಳನ್ನುಂಟು ಮಾಡುವ ಹೇಳಿಕೆಯಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.
ಬಿಜೆಪಿಯ ತಾರಾ ಪ್ರಚಾರಕಿಯಾಗಿ ಆಗಮಿಸಿದ್ದ ನಟಿ ಶ್ರುತಿ ತಮ್ಮ ಭಾಷಣದಲ್ಲಿ, ‘ನಿಮ್ಮ ವಂಶ ಉದ್ಧಾರವಾಗಲು ಯಾರಿಗೆ ಮತ ನೀಡಬೇಕು, ಯಾರಿಗೆ ಮತ ಹಾಕಿದರೆ ಯಾರ ವಂಶ ಉದ್ಧಾರವಾಗುತ್ತದೆ’ ಎಂಬ ಬಗ್ಗೆ ನೀಡಿರುವ ಹೇಳಿಕೆ ವೈರತ್ವ ಉಂಟು ಮಾಡುವ ಮತ್ತು ಭೀತಿಯನ್ನು ಹುಟ್ಟಿಸುವ ಹೇಳಿಕೆಯಾಗಿದೆ ಎಂದು ಎಂಸಿಸಿ ನೋಡಲ್ ಅಧಿಕಾರಿ ಪಂಪಾಪತಿ ನಾಯಕ್ ವಿಡಿಯೋ ದಾಖಲೆ ಸಹಿತ ಹಿರೇಕೆರೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಪಿಸಿಸಿ ವಕ್ತಾರ ಲಕ್ಷ್ಮಣ, ಜೆಡಿಎಸ್ ಕೂಡ ನಟಿಯ ಹೇಳಿಕೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಬಿಜೆಪಿಯ ಕೇಸರಿ ಮಹಿಳಾ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ‘ಮಹಿಳಾ ಸಂಗಮ’ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಪರ ಪ್ರಚಾರ ಮಾಡಲು ಬಂದಿದ್ದ ಶೃತಿ, ‘ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ, ಒಂದೆ ಮಾತಿನಲ್ಲಿ ಹೇಳಿ ಮುಗಿಸಿಬಿಡುತ್ತೇನೆ. ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್‌ಗೆ ಮತ ಹಾಕಿ. ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ಗೆ ಮತ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕಾದರೆ ಬಿಜೆಪಿಗೆ ಮತ ಹಾಕಿ ಎಂದಿದ್ದರು.
ಇದೇ ಹೇಳಿಕೆ ಸಂಬಂಧ ಇದೀಗ ನಟಿ ಶೃತಿ ವಿರುದ್ಧ ಕಲಂ 505(2) ರಡಿ ಹಿರೆಕೇರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.