ಗೊಂಬೆಗಳ ನಾಡು ಚನ್ನಪಟ್ಟಣದಲ್ಲಿ 'ಕಿಂಗ್ ಮೇಕರ್' ಆಗಲಿದ್ದಾರೆಯೇ ಕುಮಾರಸ್ವಾಮಿ? 'ಯೋಗ'ವಿದೆಯೇ ಯೋಗೇಶ್ವರ್ ಗೆ?
ಆಟಿಕೆಗಳ ನಾಡು ಚನ್ನಪಟ್ಟಣ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಸಿಪಿ ಯೋಗೇಶ್ವರ್ ನಡುವೆ ತೀವ್ರ ರಾಜಕೀಯ ಕದನಕ್ಕೆ ಸಾಕ್ಷಿಯಾಗಲಿದೆ. ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸುವ ಗುರಿ ಹೊಂದಿದ್ದು, ಹಾಲಿ ಎ
Published: 28th April 2023 10:09 AM | Last Updated: 28th April 2023 01:49 PM | A+A A-

ಸಿ ಪಿ ಯೋಗೇಶ್ವರ್, ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಆಟಿಕೆಗಳ ನಾಡು ಚನ್ನಪಟ್ಟಣ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಸಿಪಿ ಯೋಗೇಶ್ವರ್ ನಡುವೆ ತೀವ್ರ ರಾಜಕೀಯ ಕದನಕ್ಕೆ ಸಾಕ್ಷಿಯಾಗಲಿದೆ. ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸುವ ಗುರಿ ಹೊಂದಿದ್ದು, ಹಾಲಿ ಎಂಎಲ್‌ಸಿ ಯೋಗೇಶ್ವರ್ ಅವರನ್ನು ಎದುರಿಸಲಿದ್ದಾರೆ. ಯೋಗೇಶ್ವರ್ ಕ್ಷೇತ್ರದಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಲು ಶ್ರಮಿಸುತ್ತಿದ್ದಾರೆ.
ಒಕ್ಕಲಿಗ ಸಮುದಾಯದ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ಹಿಂದಿನಿಂದಲೂ ಜೆಡಿಎಸ್ ಭದ್ರಕೋಟೆ. ಆದರೂ ಯೋಗೇಶ್ವರ್ 2011 ರ ಉಪಚುನಾವಣೆ ಸೇರಿದಂತೆ ಐದು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಬದುಕು ಆರಂಭಿಸಿದ ಯೋಗೇಶ್ವರ್ ಅವರು ಕಾಂಗ್ರೆಸ್, ಬಿಜೆಪಿ, ಎಸ್‌ಪಿ ಬಳಿಕ ಮತ್ತೆ ಬಿಜೆಪಿ ಸೇರುವ ಮೂಲಕ ಪಕ್ಷದಿಂದ ಪಕ್ಷಕ್ಕೆ ಹಾರಿದವರು.
2013ರಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳ ಅಂತರದಿಂದ ಸೋಲಿಸಿದ್ದರು. 2018ರಲ್ಲಿ ಕುಮಾರಸ್ವಾಮಿ ಅವರೇ ಎಂಟ್ರಿ ಕೊಡುವುದರೊಂದಿಗೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಯೋಗೇಶ್ವರ್ 21,530 ಮತಗಳಿಂದ ಸೋತಿದ್ದರು.
ತನಗೆ ‘ಆಧುನಿಕ ಭಗೀರಥ’ ಎಂಬ ಹೆಸರು ತಂದುಕೊಟ್ಟ ಕೆರೆಗಳನ್ನು ತುಂಬಿಸುವ ಕೆಲಸವು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಹಾಯ ಮಾಡುತ್ತದೆ ಎಂಬುದು ನಟ ಹಾಗೂ ರಾಜಕಾರಣಿ ಯೋಗೇಶ್ವರ್ ಅವರ ನಂಬಿಕೆ. ಅತಿಯಾದ ಆತ್ಮವಿಶ್ವಾಸದಿಂದ ಈ ಪ್ರದೇಶದಲ್ಲಿ ಗಟ್ಟಿ ನೆಲೆ ಇಲ್ಲದ ಬಿಜೆಪಿಗೆ ಸೇರ್ಪಡೆಯಾಗಿ ಕಳೆದ ಚುನಾವಣೆಯಲ್ಲಿ ಸೋತರು. ಕಳೆದ ಚುನಾವಣೆಯಲ್ಲಿ ಫಲಿತಾಂಶ ಹೊರಬೀಳುವ ಮುನ್ನವೇ ಯೋಗೇಶ್ವರ್ ತಮ್ಮ ಸೋಲನ್ನು ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ತಾವೇ ಕಟ್ಟಿದ ಬಿಜೆಪಿ ಕೋಟೆ ಕೆಡವುವ ಉಮೇದಿನಲ್ಲಿ ಶೆಟ್ಟರ್: ವ್ಯಕ್ತಿಯೋ, ಪಕ್ಷವೋ? ಜಿಜ್ಞಾಸೆಯಲ್ಲಿ ಕ್ಷೇತ್ರದ ಮತದಾರ!
ಈ ಬಾರಿ ಅವರು ಕುಮಾರಸ್ವಾಮಿ ಅವರನ್ನು ತೀವ್ರ ಹುರುಪಿನಿಂದ ಎದುರಿಸಲು ಸಜ್ಜಾಗಿದ್ದಾರೆ. ನಾಮಪತ್ರ ಸಲ್ಲಿಸುವಾಗ ಕುಮಾರಸ್ವಾಮಿಯವರಿಗಿಂತ ಹೆಚ್ಚು ಜನರು ಇವರ ರೋಡ್‌ಶೋನಲ್ಲಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ, ಆಡಳಿತವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಸ್ವತಃ ಪ್ರಧಾನಿಯವರೇ ಈ ಭಾಗದಲ್ಲಿ ಪ್ರಚಾರ ನಡೆಸುವ ಸಾಧ್ಯತೆಯಿದೆ. ಇವರಿಬ್ಬರ ಹಣಾಹಣಿಯಲ್ಲಿ ಕಾಂಗ್ರೆಸ್ ಸೊರಗಿಹೋಗಿದೆ. ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ.
ಯೋಗೇಶ್ವರ್ ಅವರು ಪಕ್ಷದ ಕೆಲವರನ್ನು ಬಿಜೆಪಿಯ ತೆಕ್ಕೆಗೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗಿರುವಂತೆಯೇ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಮರು ಆಯ್ಕೆ ಮಾಡಲು ದೃಢವಾಗಿ ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಅವರ ಕಾರ್ಯಕರ್ತರು ತಂತ್ರ ಹೆಣೆಯುತ್ತಿದ್ದಂತೆ ಯೋಗೇಶ್ವರ್ ಅವರ ಕಾರ್ಯಕರ್ತರು ಯೋಗೇಶ್ವರ್ ಅವರು ಚನ್ನಪಟ್ಟಣದವರಾಗಿದ್ದು, ಕುಮಾರಸ್ವಾಮಿ ಹಾಸನ ಮೂಲದವರು ಎಂದು ಕ್ಷೇತ್ರದ ಮತದಾರರಲ್ಲಿ ಪ್ರಚಾರ ಮಾಡಿ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ನೋಡಬೇಕು.
ಕ್ಷೇತ್ರದಲ್ಲಿ 2,30,327 ಮತದಾರರಲ್ಲಿ ಸುಮಾರು ಶೇಕಡಾ 40ರಷ್ಟು ಒಕ್ಕಲಿಗರ ಪ್ರಾಬಲ್ಯ ಹೊಂದಿದ್ದಾರೆ, ಸುಮಾರು 30,000 ಮುಸ್ಲಿಂ ಮತದಾರರಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಯೋಗೇಶ್ವರ್ ಅವರತ್ತ ಒಲವು ತೋರದಿರುವುದು ಈ ಬಾರಿಯೂ ಅವರಿಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: 'ಮುನಿ' ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ತಂತ್ರ: 'ರಾಜರಾಜೇಶ್ವರಿ' ಆಶೀರ್ವಾದ ಕಮಲಕ್ಕೋ, ಕುಸುಮಾಗೋ?
ಕುಮಾರಸ್ವಾಮಿ ಒಕ್ಕಲಿಗ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೂ ಅಲ್ಪಸಂಖ್ಯಾತರು ಹಾಗೂ ಇತರೆ ಸಮುದಾಯದವರ ನೆರವಿನಿಂದ ಅನಾಯಾಸವಾಗಿ ಪೈಪೋಟಿ ನಡೆಸಲಿದ್ದಾರೆ ಎಂಬ ವಿಶ್ವಾಸ ಜೆಡಿಎಸ್ ಪಾಳಯದಲ್ಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬಂದು ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಕಿಂಗ್ ಮೇಕರ್ ಆಗಲಿದ್ದಾರೆ ಎಂಬ ಆಸೆ, ಕನಸು ಮತ್ತು ನಿರೀಕ್ಷೆಗಳು ಜೆಡಿಎಸ್ ಪಾಳೆಯದಲ್ಲಿದ್ದು ಚನ್ನಪಟ್ಟಣದಲ್ಲಿ ಸದ್ಯಕ್ಕೆ ಅವರ ಕೈ ಮೇಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಯೋಗೇಶ್ವರ್ ತಮ್ಮ ಚುನಾವಣಾ ತಂತ್ರವನ್ನು ಬಿಟ್ಟುಕೊಡುತ್ತಿಲ್ಲ.