ಮೋದಿ ವಿರುದ್ಧ ಕಾಂಗ್ರೆಸ್ ಎಷ್ಟು ಕೆಟ್ಟ ಪದಗಳನ್ನು ಬಳಸುತ್ತದೆಯೋ, ಅದು ಬಿಜೆಪಿಗೆ ಹೆಚ್ಚಿನ ಬಲ ನೀಡುತ್ತದೆ: ಅಮಿತ್ ಶಾ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಡಿಕೇರಿ ನಗರದಲ್ಲಿ ರೋಡ್ ಶೋ ನಡೆಸಿದರು.
Published: 29th April 2023 04:32 PM | Last Updated: 29th April 2023 07:31 PM | A+A A-

ಅಮಿತ್ ಶಾ ರೋಡ್ ಶೋ
ಮಡಿಕೇರಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಡಿಕೇರಿ ನಗರದಲ್ಲಿ ರೋಡ್ ಶೋ ನಡೆಸಿದರು.
ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಅಮಿತ್ ಶಾ ಸುಮಾರು ಎರಡು ಕಿಲೋಮೀಟರ್ ರೋಡ್ ಶೋನಲ್ಲಿ ಪಾಲ್ಗೊಂಡರು. ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕರಾದ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಅಪ್ಪಚ್ಚು ರಂಜನ್ ಭಾಗಿಯಾಗಿದ್ದರು.
ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆಂದು ನಗರಕ್ಕೆ ಭೇಟಿ ನೀಡಿದ ಶಾ ಅವರು ರೋಡ್ ಶೋನಲ್ಲಿ ಮಾತ್ರ ಭಾಗವಹಿಸಿದ್ದರು. ಸುಮಾರು ಎರಡು ಗಂಟೆಗಳ ತಡವಾಗಿ ಆಗಮಿಸಿದ ಅವರು ರೋಡ್ ಶೋವನ್ನು ಅರ್ಧಕ್ಕೆ ನಿಲ್ಲಿಸಿದರು. ನಂತರ ಕೆಲ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಶಾ, ಕೊಡಗು ಅಥವಾ ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಯಾವುದೇ ಪ್ರತಿಸ್ಪರ್ಧಿಯಿಲ್ಲ. ಬಿಜೆಪಿ ಬಹುಮತದಿಂದ ಗೆದ್ದು ಡಬಲ್ ಇಂಜಿನ್ ಸರ್ಕಾರ ರಚಿಸಲಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಇದನ್ನೂ ಓದಿ: ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳಲಿದೆ: ಬೀದರ್'ನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಹಲವಾರು ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಶಾ, ಕಾಂಗ್ರೆಸ್ ಎಷ್ಟು ಕೆಟ್ಟ ಪದಗಳನ್ನು ಬಳಸುತ್ತದೆಯೋ, ಅದು ಬಿಜೆಪಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ರೋಡ್ ಶೋನಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು.
ಏತನ್ಮಧ್ಯೆ, ಹೆಚ್ಚುವರಿ ಪೊಲೀಸ್ ಪಡೆಯನ್ನು ನಗರದಾದ್ಯಂತ ನಿಯೋಜಿಸಲಾಗಿತ್ತು. ಬೆಂಗಾವಲು ಪಡೆಗೆ ದಾರಿ ಮಾಡಿಕೊಡಲು ಬೆಳಿಗ್ಗೆಯಿಂದಲೇ ನಗರದ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ರಾಜಾ ಸೀಟ್‌ಗೆ ಪ್ರವಾಸಿಗರ ಪ್ರವೇಶವನ್ನು ಪೊಲೀಸರು ನಿಷೇಧಿಸಿದ್ದರು. ಹಲವರು ಪ್ರವಾಸಿ ತಾಣದ ಹೊರಗೆ ಕಾದು ನಿರಾಶರಾಗಿ ಹಿಂತಿರುಗಿದರು. ರೋಡ್ ಶೋ ವೇಳೆ ನಗರದಾದ್ಯಂತ ವಿಶೇಷ ಪಡೆಗಳು ಸೇರಿದಂತೆ 600ಕ್ಕೂ ಹೆಚ್ಚು ಪೊಲೀಸ್ ಪಡೆಗಳು ಭದ್ರತೆ ಒದಗಿಸಿದ್ದವು.