ಬೆಂಗಳೂರು: ಯಾರಿಗೂ ಕರೆ ಮಾಡಿ ಕ್ಷಮೆ ಕೇಳುವಂತೆ ಹೇಳಿಲ್ಲ. ಕ್ಷಮೆ ಕೇಳುವುದನ್ನು ನಾನು ಹೆಮ್ಮೆ ಪಡುವುದಿಲ್ಲ ಎಂದು ನಟ ಸುದೀಪ್ ಅವರು ಹೇಳಿದ್ದಾರೆ.
ಕಿಚ್ಚ ಸುದೀಪ್ ಬಗ್ಗೆ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಲೋಕೇಶ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಮಾತನಾಡಿದ್ದ ಲೋಕೇಶ್ ಅವರು, ‘ಎನ್.ಮಹೇಶ್ ಅವರು ಪದೇ ಪದೇ ಕಿಚ್ಚ ಸುದೀಪ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು, ಜೇಬಿಗೆ ಹಾಕ್ಕೊಂಡು ಹೋಗ್ತಾ ಇರ್ತಾರೆ’ ಎಂದು ಹೇಳಿದ್ದರು. ಈ ಕುರಿತು ಆಡಿಯೋ ವೈರಲ್ ಆಗಿತ್ತು.
ಈ ಹೇಳಿಕೆಗೆ ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದ್ದು, ಲೋಕೇಷ್ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದರ ಬೆನ್ನಲ್ಲೇ ವಿಡಿಯೋ ಮಾಡಿದ್ದ ಲೋಕೇಶ್ ಅವರು, ಸುದೀಪ್ ಅವರು ನನಗೆ ಕರೆ ಮಾಡಿದ್ದರು. ಅವರು ನಮ್ಮವರು. ಅವರೆಲ್ಲರ ಬಳಿ ಕ್ಷಮೆ ಕೇಳಿ ಎಂದು ಹೇಳಿದ್ದರು. ಹಾಗಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ದರು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಡಿಯೋ ಕುರಿತು ಸುದೀಪ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ‘ನಾನು ಯಾರಿಗೂ ಕರೆ ಮಾಡಿಲ್ಲ. ಕ್ಷಮೆ ಕೇಳುವುದನ್ನು ನಾನು ಹೆಮ್ಮೆ ಪಡುವುದಿಲ್ಲ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಹಳೆಯ ಸಿದ್ಧಾಂತ. ನಾನು ಹೇಳಿಲ್ಲ’ ಎಂದು ಹೇಳಿದ್ದಾರೆ.
Advertisement