ಎ.ಟಿ ರಾಮಸ್ವಾಮಿ, ಎ.ಮಂಜು ಪಕ್ಷಾಂತರ ಪರ್ವ: ಜೆಡಿಎಸ್ ನಿಂದ ಬಿಜೆಪಿಗೆ ಜಿಗಿಜಿಗಿತ; ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರಣ!

ಜೆಡಿಎಸ್‌ನ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ  ಹಾಗೂ ಬಿಜೆಪಿ ಮುಖಂಡ ಎ ಮಂಜು ಅವರು ರಾಜಕೀಯ ಪಕ್ಷಗಳನ್ನು ಬದಲಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಎ.ಟಿ ರಾಮಸ್ವಾಮಿ ಮತ್ತು ಎ.ಮಂಜು
ಎ.ಟಿ ರಾಮಸ್ವಾಮಿ ಮತ್ತು ಎ.ಮಂಜು

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಧ್ರುವೀಕರಣಕ್ಕೆ ಅರಕಲಗೂಡು ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಜೆಡಿಎಸ್‌ನ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಬಿಜೆಪಿ ಮುಖಂಡ ಎ ಮಂಜು ಅವರು ರಾಜಕೀಯ ಪಕ್ಷಗಳನ್ನು ಬದಲಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಮಂಜು ಶೀಘ್ರದಲ್ಲೇ ಜೆಡಿಎಸ್‌ ಸೇರುವ ಸಾಧ್ಯತೆ ಇದೆ. ಪಕ್ಷದಲ್ಲಿ ಅತೃಪ್ತರಾಗಿದ್ದು, ಹಿರಿಯ ನಾಯಕರ ವರ್ತನೆಯಿಂದ ಬೇಸರಗೊಂಡಿರುವ ಜೆಡಿಎಸ್‌ನ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಆರು ತಿಂಗಳಿನಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಹಿರಿಯ ಶಾಸಕರಲ್ಲಿ ಒಬ್ಬರಾದ ಎ.ಟಿ.ರಾಮಸ್ವಾಮಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ  ಪಕ್ಷ ಬದಲಾಯಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎ.ಟಿ.ರಾಮಸ್ವಾಮಿ ಅವರ ಬಳಿ ಎರಡು ಆಯ್ಕೆಗಳಿದ್ದು, ಮತ್ತೊಂದು ರಾಜಕೀಯ ಪಕ್ಷಕ್ಕೆ ತೆರಳಲು ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎ.ಟಿ ರಾಮಸ್ವಾಮಿ ಬಿಜೆಪಿ ಸೇರಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಮಂಜು ಮತ್ತು ಎಟಿಆರ್ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು, ತಮ್ಮ ಅನುಯಾಯಿಗಳಿಂದ ಮಾಹಿತಿ ಪಡೆಯಲು ಸರಣಿ ಸಭೆಗಳನ್ನು ನಡೆಸಿದ್ದಾರೆ.

ಎ ಮಂಜು ಅವರನ್ನು ಕೇಳಿದಾಗ, ನಾನು ಹಳ್ಳಿಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಹೆಚ್ಚು ಜನರು ಕಣದಲ್ಲಿ ಉಳಿಯುವಂತೆ ಒತ್ತಾಯಿಸಿದ ಕಾರಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.  ಅವರು ಸ್ವತಂತ್ರವಾಗಿ ಚುನಾವಣೆ ಎದುರಿಸಲು ಯೋಚಿಸುತ್ತಿದ್ದಾರೆ. ತಮ್ಮ ಪಕ್ಷವು ಜನರ ಪಕ್ಷವಾಗಿದ್ದು, ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.

ಎ.ಟಿ ರಾಮಸ್ವಾಮಿ ಎರಡು ದಶಕಗಳ ಹಿಂದೆ ಜೆಡಿಎಸ್‌ಗೆ ಪಕ್ಷಾಂತರಗೊಂಡ ನಂತರ ಕಾಂಗ್ರೆಸ್‌ ಕಡೆ ಹಿಂತಿರುಗಿ ನೋಡಿಲ್ಲ, ಹೀಗಾಗಿ ಎಟಿಆರ್‌ಗೆ ಚುನಾವಣೆ ಎದುರಿಸಲು ಇರುವ ಏಕೈಕ ಆಯ್ಕೆ ಬಿಜೆಪಿಯಾಗಿದೆ ಎಂದು ಎಟಿ ರಾಮಸ್ವಾಮಿ ಅವರ ಆಪ್ತ ಮೂಲಗಳು ತಿಳಿಸಿವೆ. ಎಟಿಆರ್ ಈಗಾಗಲೇ ಬಿಜೆಪಿಯ ಹಿರಿಯ ನಾಯಕರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದು, ಬೇಷರತ್ತಾಗಿ ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com