ಜೆಡಿಎಸ್ ನಾಯಕರ ವಿರುದ್ಧ ಎಟಿ ರಾಮಸ್ವಾಮಿ ವಾಗ್ದಾಳಿ: ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಶೀಘ್ರವೇ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ.
Published: 05th February 2023 07:33 PM | Last Updated: 06th February 2023 02:17 PM | A+A A-

ಎಟಿ ರಾಮಸ್ವಾಮಿ
ಅರಕಲಗೂಡು: ಶೀಘ್ರವೇ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಎ.ಮಂಜು ಅವರಿಗೆ ಅರಕಲಗೂಡು ಜೆಡಿಎಸ್ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ತಮ್ಮದೇ ಪಕ್ಷದ ನಾಯಕರಿಂದ ಸುಳ್ಳು ಆರೋಪಗಳನ್ನು ಮಾಡುತ್ತಾ ನನನ್ನು ಟಾರ್ಗೆಟ್ ಮಾಡಲಾಗಿದ್ದು, ಮೂಲೆಗುಂಪು ಮಾಡಲಾಗಿದೆ ಎಂದರು.
ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಮನೆ ಮುಂದೆ ನನ್ನ ರಾಜಕೀಯ ಹಿತಶತ್ರುಗಳು ನನಗೆ ಟಿಕೆಟ್ ಕೊಡದಂತೆ ಪ್ರತಿಭಟನೆ ನಡೆಸಿದ ಬಳಿಕ ಮನಸ್ಸಿಗೆ ನೋವಾಗಿದೆ. ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿದ್ದರೂ ಮತ್ತೊಬ್ಬ ನಾಯಕನಿಗೆ ಟಿಕೆಟ್ ನೀಡುವ ಮೂಲಕ ಆತುರದ ನಿರ್ಧಾರ ಕೈಗೊಂಡು ಜೆಡಿಎಸ್ ತಾನಾಗಿಯೇ ಬೆಂಕಿ ಹಚ್ಚಿಕೊಂಡಿದೆ ಎಂದು ಆರೋಪಿಸಿದರು.
ಪಕ್ಷದಲ್ಲಿ ನಾನೇನು ತಪ್ಪು ಮಾಡಿದ್ದೇನೆ ಮತ್ತು ನಾಯಕರು ನಿರ್ಧಾರ ಕೈಗೊಳ್ಳುವ ಮುನ್ನ ಸಮಸ್ಯೆಗಳಿದ್ದರೆ ಚರ್ಚಿಸಬಹುದಿತ್ತು. ಜೆಡಿಎಸ್ ತೊರೆಯುತ್ತೇನೆ ಎಂದು ಎಂದಿಗೂ ಹೇಳಿಲ್ಲ ಆದರೆ, ಜೆಡಿಎಸ್ ನಾಯಕರ ನಡೆ ಅಚ್ಚರಿ ತಂದಿದೆ ಎಂದರು. ಅರಕಲಗೂಡಿನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಫೆಬ್ರವರಿ 10ರಂದು ಕಾರ್ಯಕರ್ತರ ಸಮಾವೇಶದಲ್ಲಿ ಎ ಮಂಜು ಜೆಡಿಎಸ್‌ಗೆ ಸೇರ್ಪಡೆ!
ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ವೇಳೆ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರ ಫೋಟೋಗಳನ್ನು ಬ್ಯಾನರ್ ಮತ್ತು ಫ್ಲೆಕ್ಸ್‌ಗಳಲ್ಲಿ ಹಾಕದ ಎಟಿ ರಾಮಸ್ವಾಮಿ ವರ್ತನೆಗೆ ಜೆಡಿಎಸ್ ನಾಯಕರು ವಿಶೇಷವಾಗಿ ಹೆಚ್.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮಸ್ವಾಮಿ ಅವರು ಒಂದು ವರ್ಷದಿಂದ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಮೂವರನ್ನು ಆಹ್ವಾನಿಸಿರಲಿಲ್ಲ.
ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡು, ಅರಕಲಗೂಡು ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಅವರನ್ನು ಬೆಂಬಲಿಸಿದರೆ ಎಂಎಲ್‌ಸಿ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮಸ್ವಾಮಿ ಅವರು ಇತ್ತೀಚೆಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಮತ್ತು ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಎಟಿ ರಾಮಸ್ವಾಮಿ ಅವರ ಆಪ್ತರು ತಿಳಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಿಸಿ ಕೆಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜೆಡಿಎಸ್ ಮುಖಂಡರು ಇತ್ತೀಚೆಗೆ ಎಟಿ ರಾಮಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಟಿ ರಾಮಸ್ವಾಮಿ ಆ ಆಫರ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.