ಪ್ರಧಾನಿ ಮೋದಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ?: ಕಾಂಗ್ರೆಸ್
ಅದಾನಿ ಸಮೂಹದ ಮೆಗಾ ಹಗರಣದ ಬಗ್ಗೆ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ?ಮೋದಿಯವರಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
Published: 06th February 2023 01:46 PM | Last Updated: 06th February 2023 02:31 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಅದಾನಿ ಸಮೂಹದ ಮೆಗಾ ಹಗರಣದ ಬಗ್ಗೆ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ?ಮೋದಿಯವರಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು, ಅದಾನಿ ಸಮೂಹದ ಮೆಗಾ ಹಗರಣದ ಬಗ್ಗೆ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ? ಅದಾನಿ ವಂಚನೆಯ ಬಗ್ಗೆ ಮಾತಾಡಲು ಮೋದಿಯವರಿಗೆ ಸ್ನೇಹ ಅಡ್ಡಿಯಾಗುತ್ತಿದೆಯೇ? ಸ್ನೇಹಕ್ಕಾಗಿ ದೇಶದ ಲಕ್ಷಾಂತರ ಜನರ ಹೂಡಿಕೆ ಹಣವನ್ನು ಅಪಾಯದಲ್ಲಿಡುತ್ತಿದ್ದಾರೆಯೇ ಮೋದಿ? ಪ್ರಧಾನಿ ಮೋದಿಯವರಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ? ಎಂದು ಪ್ರಶ್ನಿಸಿದ್ದಾರೆ.
ಭಾಗ್ ಮಿಲ್ಕಾ ಭಾಗ್ ಎಂಬಂತೆ ಮೋದಿ ಆಡಳಿತದಲ್ಲಿ ಮೆಹುಲ್ ಚೋಕ್ಸಿ,ನೀರವ್ ಮೋದಿ,ಲಲಿತ್ ಮೋದಿ,ಮಲ್ಯ ಸೇರಿದಂತೆ ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಓಡಿ ಹೋಗಿದ್ದಾರೆ. ಈಗ ದೇಶ ಬಿಟ್ಟು ಓಡುವುದು ಅದಾನಿ ಸರದಿಯೇ? ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದ ಎಲ್ಐಸಿಯ 23 ಸಾವಿರ ಕೋಟಿ, ಎಸ್'ಬಿಐ ಕೊಟ್ಟ ಸಾವಿರಾರು ಕೋಟಿ ಸಾಲಕ್ಕೆ ಪಂಗನಾಮ ಗ್ಯಾರಂಟಿಯೇ? ಎಂದು ಕೇಳಿದ್ದಾರೆ.
ಆರ್ಥಿಕ ಅಪರಾಧಗಳ ಬಗ್ಗೆ ತಮ್ಮದು ಝೀರೋ ಟಾಲರೆನ್ಸ್ ನಿಲುವು ಎಂದು ಮೋದಿಯವರು ಹೇಳುತ್ತಾರೆ. ಆದರೆ, ಅದಾನಿ ಎಸಗಿದ ಆರ್ಥಿಕ ಅಪರಾಧದ ಬಗ್ಗೆ ಮೋದಿಯವರ ವ್ಯಾಖ್ಯಾನವೇನು? ಇಡಿ, ಸಿಬಿಐ ಮತ್ತು ಐಟಿ ಸಂಸ್ಥೆಗಳು ಕೇವಲ ರಾಜಕೀಯ ವಿರೋಧಿಗಳ ವಿರುದ್ಧ ತನಿಖೆ ಮಾಡುವ ಸಂಸ್ಥೆಗಳೇ? ಮೋದಿಯವರ ಅತ್ಯಾಪ್ತರಿಗೆ ಈ ತನಿಖಾ ಸಂಸ್ಥೆಗಳಿಂದ ವಿನಾಯಿತಿ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರಿಂದ ಶ್ರೀಮಂತನಾದೆ ಎಂಬ ಮಾತುಗಳು ಸುಳ್ಳು, ಸುಲಭವಾಗಿ ನನ್ನನ್ನು ಗುರಿ ಮಾಡಲಾಗುತ್ತಿದೆ: ಗೌತಮ್ ಅದಾನಿ
ಸಾರ್ವಜನಿಕರ ಜೀವನ ಭದ್ರತೆಗಾಗಿ ಕಾಂಗ್ರೆಸ್ 1956ರಲ್ಲಿ ಎಲ್ಐಸಿ ಸ್ಥಾಪಿಸಿತ್ತು. 2021ರ ವರೆಗೆ LICಯಲ್ಲಿದ್ದ ಜನರ ಹಣ ಸುಭದ್ರವಾಗಿತ್ತು. ಆದರೆ 2021ರಲ್ಲಿ ಈ ಸರ್ಕಾರ ಎಲ್ಐಸಿ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿತ್ತು. ಎಲ್ಐಸಿ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿದ್ದು ಯಾರ ಅನುಕೂಲಕ್ಕಾಗಿ ಮೋದಿಯವರೆ?
ಮೋದಿಯವರ ಸ್ನೇಹಿತ ಗೌತಮ್ ಅದಾನಿ ಇನ್ನೇನು ಕೆಲವೇ ದಿನಗಳಲ್ಲಿ ಮೋಸ್ಟ್ ವಾಂಟೆಡ್ ಫ್ಯುಜಿಟಿವ್ ಆಗಲಿದ್ದಾರೆ. ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದ LIC ಯ 23 ಸಾವಿರ ಕೋಟಿ, SBI ನ ಸಾವಿರಾರು ಕೋಟಿಗೆ ಉಂಡೆನಾಮ ಫಿಕ್ಸ್. ಮೋದಿಯವರೇ ನಿಮ್ಮ ಗೆಳೆಯನಿಗಾಗಿ ದೇಶದ ಜನರ ದುಡ್ಡಿನ ಜೊತೆ ಚೆಲ್ಲಾಟವಾಡಬೇಡಿ. ಯಾಕೆಂದರೆ ಅದು ಜನರ ಬೆವರಿನ ದುಡ್ಡು ಎಂದು ಹೇಳಿದ್ದಾರೆ.