ರಾಜ್ಯ ಸರ್ಕಾರ ತೆರೆದ 'ನಮ್ಮ ಕ್ಲಿನಿಕ್‌'ಗಳು ಬಿಜೆಪಿಯ ಪ್ರಚಾರ ಕೇಂದ್ರಗಳು: ಆಪ್

ರಾಜ್ಯ ಬಿಜೆಪಿ ಸರ್ಕಾರ ಉದ್ಘಾಟಿಸಿರುವ 'ನಮ್ಮ ಕ್ಲಿನಿಕ್‌' ಕೇವಲ ಪ್ರಚಾರ ಕೇಂದ್ರಗಳಾಗಿವೆ. ವೈದ್ಯಕೀಯ ಸೌಲಭ್ಯ ನೀಡದೇ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ವರ್ಷಕ್ಕೆ 36 ಲಕ್ಷ ರೂ.ನಲ್ಲಿ ಆಸ್ಪತ್ರೆ ನಡೆಸಲು ಹೇಗೆ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಉದ್ಘಾಟಿಸಿರುವ 'ನಮ್ಮ ಕ್ಲಿನಿಕ್‌' ಕೇವಲ ಪ್ರಚಾರ ಕೇಂದ್ರಗಳಾಗಿವೆ. ವೈದ್ಯಕೀಯ ಸೌಲಭ್ಯ ನೀಡದೇ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ವರ್ಷಕ್ಕೆ 36 ಲಕ್ಷ ರೂ.ನಲ್ಲಿ ಆಸ್ಪತ್ರೆ ನಡೆಸಲು ಹೇಗೆ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ನಗರದಲ್ಲಿ ಬಿಜೆಪಿ ಹೊಸದಾಗಿ ಉದ್ಘಾಟಿಸಿರುವ ನಮ್ಮ ಕ್ಲಿನಿಕ್ ಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬ್ಯಾನರ್‌ಗಳನ್ನು ಪ್ರದರ್ಶಿಸುವ ರಾಜಕೀಯ ಪ್ರಚಾರ ಕೇಂದ್ರಗಳಲ್ಲದೆ ಬೇರೇನೂ ಅಲ್ಲ. ನಮ್ಮ ಕ್ಲಿನಿಕ್ ಗಳಲ್ಲಿ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿಲ್ಲ. ರೋಗಿಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಚಾರ ಕೇಂದ್ರಗಳಾಗಿವೆ ಎಂದು ಹೇಳಿದ್ದಾರೆ.

ತಮ್ಮ ತಂಡವು ಹಲವಾರು ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಕೆಲಸದ ಪರಿಸ್ಥಿತಿಗಳನ್ನು ಪರಿಶೀಲಿಸಿತು. ಈ ವೇಳೆ ನಮ್ಮ ಕ್ಲಿನಿಕ್ ಗಳಲ್ಲಿ ನಮಗೆ ಕಂಡಿದ್ದು ಬಿಜೆಪಿ ನಾಯಕರ ಬ್ಯಾನರ್ ಗಳೇ ಹೊರತು ಸುಸಜ್ಜಿತ ಕ್ಲಿನಿಕ್ ಗಳು ನಮಗೆ ಕಾಣಿಸಲಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಬಿಜೆಪಿ ನಾಯಕರು ಕರ್ನಾಟಕದ ನಮ್ಮ ಕ್ಲಿನಿಕ್‌ಗಳನ್ನು ದೆಹಲಿಯಲ್ಲಿ ಸ್ಥಾಪಿಸಲಾದ ಮೊಹಲ್ಲಾ ಕ್ಲಿನಿಕ್‌ಗಳೊಂದಿಗೆ ಹೋಲಿಸಿದ್ದಾರೆ. ದೆಹಲಿಯಲ್ಲಿ ಎಎಪಿ 500 ಮೊಹಲ್ಲಾ ಕ್ಲಿನಿಕ್‌ ತೆರೆದಿದೆ. ಮುಂದಿನ ದಿನಗಳಲ್ಲಿ ಇನ್ನು 500 ಕ್ಲಿನಿಕ್‌ ತೆರೆಯುವ ಪ್ರಯತ್ನದಲ್ಲಿದೆ. ಆದರೆ, ಇಲ್ಲಿ ಬಿಜೆಪಿ ಸರ್ಕಾರ 438 ನಮ್ಮ ಕ್ಲಿನಿಕ್‌ಗಳಿಗೆ ಮಾತ್ರ ಯೋಜನೆ ರೂಪಿಸಿದೆ. ಆ ಪೈಕಿ ಬೆಂಗಳೂರಲ್ಲಿ 243, ಇನ್ನಿತರ ಕಡೆಗಳಲ್ಲಿ ಬರೀ 195 ಕ್ಲಿನಿಕ್‌ಗೆ ತೆರೆಯಲು ನಿರ್ಧರಿಸಿದೆ.

ಎಎಪಿ ಬೆಂಗಳೂರಿನ ಶಾಂತಿನಗರದಲ್ಲಿ 2 ವರ್ಷದಿಂದ ಆಮ್‌ ಆದ್ಮಿ ಕ್ಲಿನಿಕ್‌ ನಡೆಸುತ್ತಿದೆ. ಇದು ಬೆಳಗ್ಗೆ ಮಾತ್ರ ತೆರೆದಿರುತ್ತಿದ್ದು, ತಿಂಗಳಿಗೆ 8ರಿಂದ 10 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಸರ್ಕಾರದ ನಮ್ಮ ಕ್ಲಿನಿಕ್‌ಗಳು ಸಂಜೆಯವರೆಗೂ ತೆರೆದಿರುವುದರಿಂದ ಎರಡು ಪಟ್ಟು ಹೆಚ್ಚು ಖರ್ಚು ಆಗಲಿದೆ. ಬಿಜೆಪಿ ತೆರೆದಿರುವ ಕ್ಲಿನಿಕ್‌ಗೆ ವಾರ್ಷಿಕ 36 ಲಕ್ಷ ಹಣ ನೀಡುವುದಾಗಿ ತಿಳಿಸಿದೆ. ಇದು ಅಲ್ಲಿನ ಸಿಬ್ಬಂದಿ ವೇತನ, ಬಾಡಿಗೆಗೆ ಸಾಕಾಗುವುದಿಲ್ಲ ಎಂದರು.

ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಬೇಕು. ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌, ಪಾಲಿಕ್ಲಿನಿಕ್ ನಂತಹ ವ್ಯವಸ್ಥಿತ ಆಸ್ಪತ್ರೆಗಳಿವೆ. 'ನಮ್ಮ ಕ್ಲಿನಿಕ್‌' ಕೇಂದ್ರಗಳಲ್ಲಿ ತಪಾಸಣೆ ನಡೆಸಿದ ಬಳಿಕ ರೋಗಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರಿಗೆ ಮುಂದಿನ ಆಸ್ಪತ್ರೆಗೆ ಶಿಫಾರಸು ಮಾಡಬೇಕು. ಅಂತಹ ದುಸ್ಥಿತಿಯಲ್ಲಿ ಇಲ್ಲಿದೆ.

ಮುಖ್ಯಮಂತ್ರಿಗಳು ನಮ್ಮ ಕ್ಲಿನಿಕ್‌ ನಲ್ಲಿ ಟೆಲಿಮೆಡಿಸಿನ್‌ ವ್ಯವಸ್ಥೆ ಇದೆ ಎಂದಿದ್ದಾರೆ. ರೋಗಿಯನ್ನು ವೈದ್ಯರು ನೋಡದೇ ಟೆಲಿಮೆಡಿಸಿನ್‌ ಮಾಡಲು ಸಾಧ್ಯವೇ. ಎಎಪಿ ಮೊಹಲ್ಲಾ ಕ್ಲಿನಿಕ್‌ ನಕಲು ಮಾಡಲು ಹೋಗಿ ಬಿಜೆಪಿ ಈ ಕ್ಲಿನಿಕ್‌ಗಳನ್ನು ತೆರೆದಿದೆ. ರಾಜಕೀಯ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ ಅನ್ನು ಸರ್ಕಾರ ಹಾಳುಗೆಡವಿತು. ಇದೀಗ ಕ್ಲಿನಿಕ್‌ ಹೆಸರಿನಲ್ಲಿ ಜನವರಿಗೆ ಮತ್ತೊಂದು ವಂಚನೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com