'ಹಿಂದೂ ಎಂದರೆ ದೇಹ, ಹಿಂದುತ್ವ ಜೀವ': ಸಿದ್ದರಾಮಯ್ಯಗೆ ಸಿಟಿ ರವಿ
ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ದೇಹವಿದ್ದು, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಗುರುವಾರ ಪ್ರಶ್ನಿಸಿದ್ದಾರೆ.
Published: 10th February 2023 08:43 AM | Last Updated: 10th February 2023 02:06 PM | A+A A-

ಸಿಟಿ ರವಿ
ಕೋಲಾರ: ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ದೇಹವಿದ್ದು, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಗುರುವಾರ ಪ್ರಶ್ನಿಸಿದ್ದಾರೆ.
ಗುರುವಾರ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಎಸ್‌ಸಿ ಮೋರ್ಚಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಸಿಟಿ ರವಿಯವರು ಉತ್ತರಿಸಿದರು.
‘ಈ ಪದವನ್ನು ನಾನು ಬಳಸುತ್ತಿಲ್ಲ; ಜನ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ಹಿಂದುತ್ವ ಒಪ್ಪಿಕೊಳ್ಳದಿದ್ದರೆ ಅದೇ ಎರಡು ಅಕ್ಷರ ನೀವಾಗುತ್ತೀರಿ. ಆದರೆ, ನೀವು ಅದಾಗಬಾರದು ಎಂಬುದು ನಮ್ಮ ಬಯಕೆ. ಅದಕ್ಕಾಗಿ ಹಿಂದೂ ಆಗಿದ್ದವನು ಹಿಂದುತ್ವ ಒಪ್ಪಿಕೊಳ್ಳಬೇಕು. ಆಗ ಮಾತ್ರ ಜೀವ ಇರುತ್ತೆ’ ಎಂದು ಪರೋಕ್ಷವಾಗಿ ತಿವಿದರು.
'ಬಿಜೆಪಿ ರಾಷ್ಟ್ರೀಯತೆ, ಹಿಂದುತ್ವದ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷ. ಹಿಂದುತ್ವ ಪರ ಎಂದರೆ ಮುಸ್ಲಿಮರ ವಿರುದ್ಧ ಅಲ್ಲ. ಭಾರತ ನಮ್ಮದು ಎಂದವರೆಲ್ಲರೂ ಹಿಂದೂಗಳೇ' ಎಂದು ತಿಳಿಸಿದರು.
ಇದನ್ನೂ ಓದಿ: ತಾಯಿ ಅಂದಮೇಲೆ ನೀನು ಆಕೆಯ ಸಂತಾನವಲ್ಲವೇ; ಹಿಂದು ಅಂದಮೇಲೆ ಹಿಂದುತ್ವವು ಅಷ್ಟೇ: ಸಿದ್ದುಗೆ ಮಂತ್ರಾಲಯ ಶ್ರೀ ತಿರುಗೇಟು
ಬಳಿಕ ತಮ್ಮ ಅಧಿಕಾರಾವಧಿಯಲ್ಲಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಎಸ್‌ಸಿಗಳ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ವಿಫಲವಾದ ಕಾರಣ ಕಾಂಗ್ರೆಸ್ ವಿರುದ್ಧ ರವಿಯವರು ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಾಗ 1952 ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾವ ಪಕ್ಷ ಸೋಲಿಸಿತು ಎಂಬ ಪ್ರಶ್ನೆಯನ್ನು ಕೇಳಬೇಕು. ಇದಕ್ಕೆ ಅವರಿಂದ ಉತ್ತರ ಪಡೆಯಬೇಕು ಎಂದರು. ಈ ವೇಳೆ ಅಂಬೇಡ್ಕರ್ ಅವರ ಸೋಲಿಗೆ ಯಾವ ಪಕ್ಷ ಕಾರಣ ಎಂದು ನೆರೆದಿದ್ದವರನ್ನು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಜನರು ಕಾಂಗ್ರೆಸ್ ಎಂದು ಕೂಗಿದರು. ಈ ಮೂಲಕ ನೆರೆದಿದ್ದವರ ಗಮನ ಸೆಳೆದರು.
ಇದೇ ವೇಳೆ ರಾಜ್ಯದಲ್ಲಿ ಎಸ್‌ಸಿಗಳಿಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಹೆಸರಿಸಿದ ರವಿಯವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.