ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ: ಬಾದಾಮಿಯಿಂದ ಸ್ಪರ್ಧಿಸಲು ಅಭಿಮಾನಿಗಳ ಒತ್ತಡ, ಸಾಮೂಹಿಕ ರಾಜೀನಾಮೆ ಬೆದರಿಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲ, ಸಮಸ್ಯೆ ಮುಂದುವರಿದಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯನನರೇ ಈ ಹಿಂದೆ ಘೋಷಣೆ ಮಾಡಿಕೊಂಡರೂ ಈಗಿನ ಬಾದಾಮಿ, ವರುಣಾ ಕ್ಷೇತ್ರದ ಜನತೆಯ, ಅಭಿಮಾನಿಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ. 
ಸಿದ್ದರಾಮಯ್ಯ ಮನೆ ಮುಂದೆ ಬಾದಾಮಿ ಕ್ಷೇತ್ರದ ಅಭಿಮಾನಿಗಳ ಪ್ರತಿಭಟನೆ
ಸಿದ್ದರಾಮಯ್ಯ ಮನೆ ಮುಂದೆ ಬಾದಾಮಿ ಕ್ಷೇತ್ರದ ಅಭಿಮಾನಿಗಳ ಪ್ರತಿಭಟನೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲ, ಸಮಸ್ಯೆ ಮುಂದುವರಿದಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯನನರೇ ಈ ಹಿಂದೆ ಘೋಷಣೆ ಮಾಡಿಕೊಂಡರೂ ಈಗಿನ ಬಾದಾಮಿ, ವರುಣಾ ಕ್ಷೇತ್ರದ ಜನತೆಯ, ಅಭಿಮಾನಿಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ. 

ಇಂದು ಬೆಂಗಳೂರಿನ ಕುಮಾರಕೃಪದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಬಾದಾಮಿಯ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆ 'ನೀವು ಈ ಬಾರಿ ಕೋಲಾರಕ್ಕೆ ಶಿಫ್ಟ್ ಆಗುವ ಹಾಗಿಲ್ಲ, ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು, ಯಾವುದೇ ಕಾರಣಕ್ಕೂ ನಿಮ್ಮನ್ನು ನಾವು ಬಿಡುವುದಿಲ್ಲ' ಎಂದು ಪಟ್ಟುಬಿಡದೆ ಧರಣಿ, ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನರನ್ನ ಮತ್ತೆ ಬಾದಾಮಿಗೆ ಕರೆ ತರಲು ಬೆಂಗಳೂರಿಗೆ ಬಾದಾಮಿ ಕ್ಷೇತ್ರದ ಅಭಿಮಾನಿಗಳು ಆಗಮಿಸಿದ್ದಾರೆ. ಬಾದಾಮಿ, ಗುಳೇದಗುಡ್ಡ, ಕೆರೂರ ಸೇರಿದಂತೆ ನಾನಾ ಭಾಗಗಳಿಂದ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. 

ಇಂದು ಮುಂಜಾನೆಯಿಂದಲೇ ಸಿದ್ದರಾಮಯ್ಯ ನಿವಾಸ ಮುಂದೆ ಆಗಮಿಸಿದ ಅಭಿಮಾನಿಗಳು, ಬಾದಾಮಿ ಕ್ಷೇತ್ರದ ಜನತೆ ಆಗ್ರಹದ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಮುಂದೆ ಸಿದ್ದರಾಮಯ್ಯನವರ ಎಂದಿನ ಹುಸಿಕೋಪ ನಡೆಯಲೇ ಇಲ್ಲ, ಒಂದು ವೇಳೆ ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸದಿದ್ದರೆ ಕಾಂಗ್ರೆಸ್ ಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುಮಾರು 300 ಕ್ಕೂ ಅಧಿಕ ಕ್ರೂಸರ್ ವಾಹನಗಳಲ್ಲಿ ಬೆಂಗಳೂರಿಗೆ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಿದ್ದಾರೆ. ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ನಿವಾಸಕ್ಕೆ ಅಭಿಯಾನಿಗಳು ಆಗಮಿಸಿದ್ದು, ಮತ್ತೆ ಬಾದಾಮಿಯಿಂದ ಸ್ಫರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

'ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಬಾದಾಮಿ, 2018ರಲ್ಲಿ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದು ಬಾದಾಮಿ ಕ್ಷೇತ್ರದ ಜನತೆ, ಹೀಗಾಗಿ ಅವರು ಕ್ಷೇತ್ರ ಬಿಟ್ಟು ಹೋಗಬಾರದು, ಹೋದರೆ ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ, ಬಾದಾಮಿಯಲ್ಲಿ ಮತ್ತೊಮ್ಮೆ ಗೆದ್ದು ಬಂದು ಕ್ಷೇತ್ರಜ ಜನತೆಯ ಋಣ ತೀರಿಸಬೇಕು' ಎಂದಿದ್ದಾರೆ.

ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸದಿದ್ದರೆ ಪಟ್ಟಣ ಪಂಚಾಯತ್, ಪುರಸಭೆ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಸಹ ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com