ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ

2018ರಲ್ಲಿ ಶ್ರೀರಾಮುಲು ವಿರುದ್ಧ ತೊಡೆತಟ್ಟಿದ್ದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಇದೀಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ
ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ

ಬೆಂಗಳೂರು: 2018ರಲ್ಲಿ ಶ್ರೀರಾಮುಲು ವಿರುದ್ಧ ತೊಡೆತಟ್ಟಿದ್ದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಇದೀಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಖಾತರಿಯಾದ ಹಿನ್ನಲೆಯಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಿಪ್ಪೇಸ್ವಾಮಿ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಶಾಸಕ ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹೊದಿಸಿ ಪಕ್ಷದ ಬಾವುಟ ನೀಡಿ ಶ್ರೀರಾಮುಲು ಮತ್ತು ತಿಪ್ಪಾರೆಡ್ಡಿ ಅವರು ತಿಪ್ಪೇಸ್ವಾಮಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮೂಲಗಳ ಪ್ರಕಾರ ತಿಪ್ಪೇಸ್ವಾಮಿ ಅವರಿಗೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಮೊಳಕಾಲ್ಮೂರಿನ ಹಾಲಿ ಶಾಸಕ ಶ್ರೀರಾಮುಲು ಕ್ಷೇತ್ರ ಬದಲಾಯಿಸಲು ತೀರ್ಮಾನಿಸಿದ್ದು, ಹೀಗಾಗಿ ಅವರಿಗೆ ಟಿಕೆಟ್ ನೀಡುವುದಕ್ಕೆ ವರಿಷ್ಠರು ಸಮ್ಮತಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಅವರ ಹಾದಿ ಸುಗಮವಾಗಿದೆ. ಈ ಹಿಂದೆ 2013ರಲ್ಲಿ ಶ್ರೀರಾಮುಲು ಕಟ್ಟಿದ್ದ ಬಿಎಸ್‍ಆರ್ ಪಕ್ಷದಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ವಿಜೇತರಾಗಿದ್ದರು. ಬಳಿಕ ಈ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಾಗಿತ್ತು. 2018ರಲ್ಲಿ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿ ಮೊಳಕಾಲ್ಮೂರಿನಿಂದ ಸ್ರ್ಪಸಿದರೆ ಟಿಕೆಟ್ ವಂಚಿತ ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆಯಾಗಿದ್ದು, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com