ಈ ರೀತಿಯ ನಿರೂಪಣೆ ಸರಿಯಲ್ಲ.. ಪ್ರಗತಿಪರ ರಾಜಕಾರಣಕ್ಕೆ ಆದ್ಯತೆ ನೀಡಬೇಕು: ಯತ್ನಾಳ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಚುನಾವಣೆ ಹತ್ತಿರಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಬ್ಬಕ್ಕನ ವಿಚಾರವಾಗಿ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಬಿಜೆಪಿ ನಾಯಕರ ವಿರುದ್ದವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ-ಯತ್ನಾಳ್
ಪ್ರಿಯಾಂಕ್ ಖರ್ಗೆ-ಯತ್ನಾಳ್

ಬೆಂಗಳೂರು: ತಪ್ಪಿ ಕೂಡ ಸಾಬ್ರಿಗೆ ನೀವು ವೋಟ್ ಹಾಕ್ಬಾರ್ದು, ಇನ್ನು ಮುಂದೆ ವಿಜಯಪುರದಲ್ಲಿ ಯಾವ ಟಿಪ್ಪು ಸುಲ್ತಾನ್ ಆರಿಸಿ ಬರೋದಿಲ್ಲ, ಇನ್ನೇನಿದ್ದರೂ ಶಿವಾಜಿ ವಂಶದವರೇ ಆರಿಸಿ ಬರೋದು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ರಾಜ್ಯ ರಾಜಕಾರಣದಲ್ಲಿ ಈ ರೀತಿಯ ನಿರೂಪಣೆ ಸರಿಯಲ್ಲ.. ಪ್ರಗತಿಪರ ರಾಜಕಾರಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ಚುನಾವಣೆ ಹತ್ತಿರಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಬ್ಬಕ್ಕನ ವಿಚಾರವಾಗಿ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಬಿಜೆಪಿ ನಾಯಕರ ವಿರುದ್ದವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, 'ರಾಜ್ಯ ರಾಜಕಾರಣದಲ್ಲಿ ಈ ರೀತಿಯ ನಿರೂಪಣೆ ತರುವುದು ಸರಿಯಲ್ಲ. ನಾವು ಕನ್ನಡಿಗರು ಮತ್ತು ನಾವು ಪ್ರಗತಿಪರ ರಾಜಕಾರಣಕ್ಕೆ ಆದ್ಯತೆ ನೀಡುತ್ತೇವೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ ಮತ ಪಡೆಯಬೇಕು. ಸಿಎಂ ಬೊಮ್ಮಾಯಿ, ಅವರ ಸಂಪುಟ ಸೇರಿ ಇಡೀ ಬಿಜೆಪಿ ಘಟಕ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರ ವರ್ಚಸ್ಸು ಇಲ್ಲಿ ಕೆಲಸ ಮಾಡುತ್ತಿಲ್ಲ ಹೀಗಾಗಿ ಇಂತಹ ಕೆಲಸಗಳಿಗೆ ಮುಂದಾಗುತ್ತಿದ್ದಾರೆ ಎಂದು ತಿಡಿಕಾರಿದರು.

ಅಂತೆಯೇ 'ನಳೀನ್ ಕುಮಾರ್ ಕಟೀಲ್ ಅವರು ಟಿಪ್ಪು ವರ್ಸಸ್ ಸಾರ್ವಕರ್, ಟಿಪ್ಪು ವರ್ಸಸ್ ಅಬ್ಬಕ್ಕ ಅವರ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಅಬ್ಬಕ್ಕನ ಬಗ್ಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿಯವರು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಟಿಪ್ಪು ವರ್ಸಸ್ ಅಬ್ಬಕ್ಕ ಎನ್ನುತ್ತಿದ್ದಾರೆ. ಈ ಬಗ್ಗೆ ಕಟೀಲ್ ಅವರು ಚರ್ಚೆಗೆ ಬನ್ನಿ. ಬಿಜೆಪಿ ಭರವಸೆ ಎಂಬ ಪೋಸ್ಟರ್ ಹಾಕುತ್ತಿದ್ದೀರಿ. ಯಾವ ಭರವಸೆ ಈಡೇರಿಸಿದ್ದೀರಿ? ಎಂದು ಪ್ರಶ್ನಿಸಿದರು.

ಜೆಪಿಯ ವಲಸಿಗ ಸಚಿವರು ಡಿ.ಕೆ. ಶಿವಕುಮಾರ್ ಅವರು ಪಕ್ಷ ಕಟ್ಟಿದ್ದಾರಾ ಎಂದು ಹೇಳಿರುವ ವಿಚಾರವಾಗಿ ಮಾತನಾಡಿದ ಅವರು, 'ಶಿವಕುಮಾರ್ ಅವರು ಪಕ್ಷದ ಕಟ್ಟಾಳು. ಸಂಘಟನೆ ಮಟ್ಟದಿಂದ ಬೆಳೆದು ಬಂದಿರುವ ನಾಯಕ. ನಮಗೆ ಮೋದಿ, ವಲಸಿಗರ ಸರ್ಟಿಫಿಕೇಟ್ ಕೊಡಬೇಕಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ರಾಜ್ಯದ ಜನ ಹಾಗೂ ಹೈಕಮಾಂಡ್ ಸರ್ಟಿಫಿಕೇಟ್ ಕೊಟ್ಟು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸರ್ಟಿಫಿಕೇಟ್ ಬೇಕಾಗಿಲ್ಲ' ಎಂದರು.

ಇಚ್ಛಾಶಕ್ತಿ ಇದ್ದಿದ್ದರೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು
7ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರಿ ನೌಕರರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಯಾರು ಆಡಳಿತ ನಡೆಸುತ್ತಿದ್ದಾರೆ ಅವರು ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರವಾಗಿ ಬಜೆಟ್ ನಲ್ಲಿ ನಿರೀಕ್ಷೆ ಮಾಡಲಾಗಿತ್ತು. ಸರ್ಕಾರಿ ನೌಕರರ ಸಂಘದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಇದು ಸರ್ಕಾರ ನಡೆಸುವ ರೀತಿಯೇ? ಈ ಸರ್ಕಾರಕ್ಕೆ ಆಡಳಿತದ ಮೇಲೆ ನಿಯಂತ್ರಣವಿಲ್ಲ. ಮೇಲಾಧಿಕಾರಿಗಳು ಬೀದಿಯಲ್ಲಿ ಜಗಳವಾಡಿದ್ದಾರೆ. ಈ ಸರ್ಕಾರ ಸತ್ತಿದೆ. ಅವರಿಗೆ 40% ಕಮಿಷನ್ ಸಿಕ್ಕರೆ ಸಾಕು. ಜನರ ಸಮಸ್ಯೆ ಅದಕ್ಕೆ ಪರಿಹಾರ ನೀಡುವುದು ಅಗತ್ಯವಿಲ್ಲ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಸಿಎಂ ಬೊಮ್ಮಾಯಿಗೆ ಕವಡೆ ಕಿಮ್ಮತಿಲ್ಲ
ಬಿಜೆಪಿ ಸಮಾವೇಶಗಳಲ್ಲಿ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಸರು ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಅವರು ಮುಖ್ಯಮಂತ್ರಿಗಳ ಹೆಸರೂ ತೆಗೆದುಕೊಳ್ಳಲಿಲ್ಲ. ಓರ್ವ ಮುಖ್ಯಮಂತ್ರಿಗಳ ಬಗ್ಗೆ ಅವರಿಗೆ ಇಷ್ಟೋಂದು ಸಿಟ್ಟು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಈ ಸರ್ಕಾರ 40% ಸರ್ಕಾರ, ಹೀಗಾಗಿ ನಾವು ಇವರ ಹೆಸರು ತೆಗೆದುಕೊಂಡರೆ ಜನ ನಮಗೆ ಮತ ಹಾಕುವುದಿಲ್ಲ ಎಂದು ರಾಜ್ಯ ನಾಯಕರ ಹೆಸರು ಹೇಳುತ್ತಿಲ್ಲ. ಸಂಡೂರಿನಲ್ಲಿ ಅಮಿತ್ ಶಾ ಅವರು ಮೋದಿ ಅವರ ಮುಖ ನೋಡಿ ಮತ ನೀಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದಾರೆ. ಇಲ್ಲಿ ಸದನದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ.

ಇಲ್ಲಿ ರಾಜ್ಯ ನಾಯಕರು ಜನರ ವಿಶ್ವಾಸ ಇಟ್ಟುಕೊಂಡಿಲ್ಲ. ಈ ಸರ್ಕಾರ 40% ಸರ್ಕಾರ, ಪೇಸಿಎಂ ಎಂದು ದೇಶದಲ್ಲಿ ಕುಖ್ಯಾತಿ ಪಡೆದಿದ್ದಾರೆ. ಹೀಗಾಗಿ ಮೋದಿ ಮುಖ ನೋಡಿ ಮತ ನೀಡಿ ಎಂದು ಹೇಳುತ್ತಿದ್ದಾರೆ. ಸರ್ಕಾರ ನಮಗೆ ದಿನಕ್ಕೊಂದು ಹಗರಣ ನೀಡುತ್ತಿದ್ದಾರೆ. ನಾವು ದಾಖಲೆ ಸಮೇತ ಮಾತನಾಡಿದರೆ ನಮ್ಮ ವಿರುದ್ಧ ಸಿಐಡಿ ನೋಟೀಸ್ ನೀಡುತ್ತಾರೆ. ಇವರು ಯಾವುದನ್ನೂ ಬಿಡದ ರೀತಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಕಾಕಂಬಿಯಲ್ಲೂ ಹಗರಣ ಮಾಡುತ್ತಿದ್ದಾರೆ. ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಯಾವುದನ್ನು ಬಿಡುತ್ತಿಲ್ಲ. ಎಲ್ಲದರಲ್ಲೂ ಹಗರಣ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com