ಸ್ಯಾಂಟ್ರೋ ರವಿಯ ತನಿಖೆ ಮಾಡುತ್ತೇವೆಂಬ ಸಿಎಂ ಹೇಳಿಕೆ ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ: ಕಾಂಗ್ರೆಸ್

ವಂಚನೆ, ಅತ್ಯಾಚಾರ, ವೇಶ್ಯವಾಟಿಕೆ ಇತ್ಯಾದಿ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಸ್ಯಾಂಟ್ರೋ ರವಿ ಪ್ರಕರಣ ಕುರಿತು ತನಿಖೆ ಮಾಡುತ್ತೇವೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ ಎಂದು ರಾಜ್ಯ ಕಾಂಗ್ರೆಸ್ ಬುಧವಾರ ವ್ಯಂಗ್ಯವಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಂಚನೆ, ಅತ್ಯಾಚಾರ, ವೇಶ್ಯವಾಟಿಕೆ ಇತ್ಯಾದಿ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಸ್ಯಾಂಟ್ರೋ ರವಿ ಪ್ರಕರಣ ಕುರಿತು ತನಿಖೆ ಮಾಡುತ್ತೇವೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ ಎಂದು ರಾಜ್ಯ ಕಾಂಗ್ರೆಸ್ ಬುಧವಾರ ವ್ಯಂಗ್ಯವಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸ್ಯಾಂಟ್ರೋ ರವಿಯ ತನಿಖೆ ಮಾಡುತ್ತೇವೆ ಎಂದ ಸಿಎಂ ಬೊಮ್ಮಾಯಿ  ಅವರದ್ದು ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ. ಗೃಹ ಇಲಾಖೆಯೇ ಆತನ ಕೈಯ್ಯೊಳಗಿದೆ. ಬಹುತೇಕ ಪೊಲೀಸರು ಆತನ ವರ್ಗಾವಣೆ ಋಣದಲ್ಲಿದ್ದಾರೆ. ಸಿಎಂ, ಸಿಎಂ ಪುತ್ರ, ಗೃಹಸಚಿವರೇ ಆತನ ಜೇಬಲ್ಲಿದ್ದಾರೆ. ಆತನನ್ನ ಇನ್ನೂ ಬಂಧಿಸಲಾಗಿಲ್ಲ ಸಿಎಂಗಿಂತಲೂ ಪ್ರಭಾವಿಯಾದವನ ತನಿಖೆ ಪೊಲೀಸರಿಂದ ಸಾಧ್ಯವೇ?ಎಂದು ಪ್ರಶ್ನಿಸಿದೆ.

ಸ್ಯಾಂಟ್ರೋ ರವಿ ಸರ್ಕಾರದ ಚೀಫ್ ಬ್ರೋಕರ್ ಮಾತ್ರವಲ್ಲ ಬಿಜೆಪಿ ಕಾರ್ಯಕರ್ತ ಕೂಡ. ಆತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಪೊಲೀಸರೇ ಅಫಿಡವಿಟ್ ಸಲ್ಲಿಸಿದ್ದಾರೆ. ರೌಡಿ ಮೋರ್ಚಾದೊಂದಿಗೆ ಸ್ಯಾಂಟ್ರೋ ರವಿ ನೇತೃತ್ವದಲ್ಲಿ ಬ್ರೋಕರ್ಸ್ ಮೋರ್ಚಾವನ್ನೂ ತೆರೆಯಲು ಹೊರಟಿದೆಯೇ ರಾಜ್ಯ ಬಿಜೆಪಿ? ಸ್ತ್ರೀ ಪೀಡಕರೆಲ್ಲ ಬಿಜೆಪಿಯಲ್ಲೇ ಇರುವುದೇಕೆ? ಎಂದು ಪ್ರಶ್ನಿಸಿದೆ.

ಬಳಿಕ ಗೃಹ ಸಚಿವರಿಗೆ ಸರಣಿ ಪ್ರಶ್ನೆ ಮಾಡಿರುವ ಕಾಂಗ್ರೆಸ್, ಸ್ಯಾಂಟ್ರೋ ರವಿಯನ್ನ ಇನ್ನೂ ಬಂಧಿಸಲಾಗಿಲ್ಲ ಎಂದರೆ ಏನರ್ಥ ಆರಗ ಜ್ಞಾನೇಂದ್ರ ಅವರೇ? ನಿಮ್ಮ ಇಲಾಖೆಯ ಅಸಮರ್ಥ್ಯವೇ? ಸರ್ಕಾರದ ಕಣ್ಣಾಮುಚ್ಚಾಲೆ ಆಟವೇ?ನಾಯಕರ ಒತ್ತಡವೆ? ಎಲ್ಲರಿಗಿಂತ ಆತ ಪ್ರಭಾವಿಯೇ? ನಿಮ್ಮ ಭ್ರಷ್ಟಾಚಾರದ ಬಂಡವಾಳ ಹೊರಬೀಳುವ ಭಯವೇ? ಆತನ ಸಿಡಿ ಬ್ಲಾಕ್ಮೇಲ್‌ಗೆ ಭಯವೇ? ಆತ ಬಿಜೆಪಿ ಕಾರ್ಯಕರ್ತ ಎಂಬ ಮಮಕಾರವೇ? ಎಂದು ಹೇಳಿದೆ.

ಬಿಎಸ್ ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯವಲ್ಲ ಎನ್ನುವ ಮೂಲಕ ಬಿಜೆಪಿ ಯಡಿಯೂರಪ್ಪ ಅವರನ್ನು ಮೂಲೆಗೆ ತಳ್ಳುವ ಯೋಜನೆಯನ್ನು ರಾಜ್ಯ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ಬಿಜೆಪಿಯ ದ್ರೋಹದ ಬಾಣಗಳ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಂತಾಗಿದ್ದಾರೆ ಬಿಎಸ್'ವೈ. ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯ ಹಿಂದಿನ ಟಾರ್ಗೆಟ್ ಯಡಿಯೂರಪ್ಪ ಮಾತ್ರವಲ್ಲ, ಅಸಲಿ ಟಾರ್ಗೆಟ್ ವಿಜಯೇಂದ್ರ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com