ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷಗಳ ತಂತ್ರ: ಫೆಬ್ರವರಿ ಅಂತ್ಯಕ್ಕೆ ಬಿಜೆಪಿ ಯಾತ್ರೆ ಆರಂಭ

ಇನ್ನು ಎರಡು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. ರಾಜ್ಯದ ಪ್ರಮುಖ ಮೂರು ಪಕ್ಷಗಳು ಮತದಾರರನ್ನು ಓಲೈಸಲು ತಮ್ಮದೇ ಆದ ರೀತಿಯಲ್ಲಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಹಲವು ಯಾತ್ರೆಗಳನ್ನು ನಡೆಸುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಇನ್ನು ಎರಡು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. ರಾಜ್ಯದ ಪ್ರಮುಖ ಮೂರು ಪಕ್ಷಗಳು ಮತದಾರರನ್ನು ಓಲೈಸಲು ತಮ್ಮದೇ ಆದ ರೀತಿಯಲ್ಲಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಹಲವು ಯಾತ್ರೆಗಳನ್ನು ನಡೆಸುತ್ತಿದ್ದಾರೆ.

ಫೆಬ್ರವರಿ ಅಂತ್ಯದಲ್ಲಿ ರಾಜ್ಯದ ನಾಲ್ಕೂ ದಿಕ್ಕುಗಳಿಂದ ಏಕಕಾಲಕ್ಕೆ ಯಾತ್ರೆಯನ್ನು ನಡೆಸಲು ಬಿಜೆಪಿ ಸಜ್ಜಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಯಾತ್ರೆಯ ವಿವರಗಳನ್ನು ಸದ್ಯದಲ್ಲಿಯೇ ನಿರ್ಧರಿಸಲಾಗುವುದು. ಫೆಬ್ರವರಿ ಅಂತ್ಯದವರೆಗೆ ಈಗ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯನ್ನು ಮುಂದುವರಿಸುತ್ತೇವೆ. ಜಿಲ್ಲೆ ಮತ್ತು ರಾಜ್ಯ ಮಟ್ಟದ ಪ್ರಣಾಳಿಕೆಗಳನ್ನು ತಯಾರಿಸಲು ಹಲವರ ಸಲಹೆ ಸೂಚನೆಗಳನ್ನು ಪಡೆಯುತ್ತೇವೆ ಎಂದರು.

ಇನ್ನೆರಡು ತಿಂಗಳಲ್ಲಿ ಬಿಜೆಪಿಯ ಕಾರ್ಯಕ್ರಮಗಳೇನು?: ಬಿಜೆಪಿ ಪಕ್ಷ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಕ್ಷದ ಹಲವು ಮುಂಚೂಣಿ ಸಂಘಟನೆಗಳ ಸಭೆಗಳು ನಡೆಯಲಿವೆ. ಇಂದು ವಿಜಯಪುರದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭಾಗಿಯಾಗಲಿದ್ದಾರೆ. ತುಮಕೂರಿನಲ್ಲಿ ಸಿಎಂ ಬೊಮ್ಮಾಯಿಯವರು ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇನ್ನು ಹಲವು ಹಿರಿಯ ನಾಯಕರು ಬೇರೆ ಜಿಲ್ಲೆಗಳಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಎಲ್ಲಾ ಮನೆಮನೆಗಳಿಗೆ ತಲುಪಿಸುವ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ.

ಪಕ್ಷದ ಕೇಂದ್ರ ನಾಯಕರು ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಿದ್ದಾರೆ. ಪಕ್ಷ ಸಂಘಟನೆಯ ಹಲವು ಚಟುವಟಿಕೆಗಳನ್ನು ಬಲವರ್ಧಿಸಲು ನಾವು ಚರ್ಚೆ ನಡೆಸಿದ್ದೇವೆ ಎಂದರು. ಇಂದಿನ ಸಭೆಗೆ ಮಾಜಿ ಸಿಎಂ ಯಡಿಯೂರಪ್ಪನವರನ್ನು ಏಕೆ ಕರೆಯಲಿಲ್ಲ ಎಂದು ಕೇಳಿದಾಗ ಇದು ಪ್ರಾಥಮಿಕ ಮಟ್ಟದ ಸಭೆ, ಮೂಲ ವಿವರಗಳನ್ನು ಚರ್ಚೆ ನಡೆಸಿದ ನಂತರ ಹಿರಿಯರ ಸಲಹೆಗಳನ್ನು ಕೇಳಲಾಗುವುದು ಎಂದರು.

ಅವರಿಗೆ ಕೀಳರಿಮೆ: ಹಾವೇರಿಯ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿ ಯಾರು ಉಳಿದುಕೊಂಡಿದ್ದಾರೆ ಎಂದು ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳಲಿ. ಕೀಳರಿಮೆ ಮನಸ್ಥಿತಿಯಲ್ಲಿರುವವರು ಇಂತಹ ಹತಾಶೆಯ ಹೇಳಿಕೆ ನೀಡುತ್ತಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com