ಶೀಘ್ರದಲ್ಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕೆಎಂ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ!
ಫೆ.3ರಂದು ಅರಸೀಕೆರೆಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸುವ ಮೂಲಕ ಅರಸೀಕೆರೆ ಹಾಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ದೊಡ್ಡ ಹೊಡೆತ ನೀಡಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.
Published: 23rd January 2023 09:36 PM | Last Updated: 24th January 2023 01:36 PM | A+A A-

ಕೆಎಂ ಶಿವಲಿಂಗೇಗೌಡ
ಹಾಸನ: ಫೆ.3ರಂದು ಅರಸೀಕೆರೆಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸುವ ಮೂಲಕ ಅರಸೀಕೆರೆ ಹಾಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ದೊಡ್ಡ ಹೊಡೆತ ನೀಡಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಗುರಿ ಹೊಂದಿರುವ ಜೆಡಿಎಸ್ ನಾಯಕರಿಗೆ ಈ ಸಮಾವೇಶ ಮಹತ್ವದ್ದಾಗಿದೆ. ಲಿಂಗಾಯತ ಪ್ರಾಬಲ್ಯದ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದು ಮೂರು ಅವಧಿಗೆ ಗೆದ್ದಿರುವ ಶಿವಲೆಂಗೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಜೆಡಿಎಸ್ ನಿಂದ ಸ್ಪರ್ಧಿಸಿದರೆ ಸೋಲುತ್ತೇನೆ ಎಂದು ಶಿವಲಿಂಗೇಗೌಡ ತಮ್ಮ ಬೆಂಬಲಿಗರೊಬ್ಬರಿಗೆ ತಿಳಿಸಿದ್ದಾರೆ. ಜೆಡಿಎಸ್ ನಾಯಕರ ವರ್ತನೆಯಿಂದ ಹತಾಶರಾಗಿರುವ ಶಿವಲಿಂಗೇಗೌಡ ಒಂದೆರಡು ತಿಂಗಳಿಂದ ಜೆಡಿಎಸ್ ನಾಯಕರ ಜತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಕುತೂಹಲ ವಿಷಯವೆಂದರೆ ಜೆಡಿಎಸ್ ನಾಯಕರು ಕೆ.ಎಂ.ಶಿವಲಿಂಗೇಗೌಡ ಅವರನ್ನೂ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ. ಆದರೆ ಶಿವಲಿಂಗೇಗೌಡ ಅವರು ಬಿಳಿಚೌಡಯ್ಯ, ಬಂಡಿಗೌಡ ರಾಜಣ್ಣ, ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಸೇರಿದಂತೆ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಲಿಂಗೇಗೌಡ ಅವರು ತಮ್ಮ ತೋಟದ ಮನೆಯಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಸಿದ್ದು, ಕ್ಷೇತ್ರದಲ್ಲಿ ಭದ್ರ ನೆಲೆ ಹೊಂದಿರುವ ಜೆಡಿಎಸ್‌ನಲ್ಲಿಯೇ ಉಳಿಯುವಂತೆ ಒಂದು ಭಾಗದ ಮುಖಂಡರು ಒತ್ತಾಯಿಸಿದ್ದರಿಂದ ತೀರ್ಮಾನಕ್ಕೆ ಬರಲು ವಿಫಲರಾಗಿದ್ದಾರೆ. ಆದರೆ, ಶಿವಲಿಂಗೇಗೌಡ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗದ ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪಕ್ಷದ ನಿಷ್ಠಾವಂತರ ಕಡೆಗಣನೆ, ವಲಸಿಗರಿಗೆ ಮಣೆ: ಶಿವಲಿಂಗೇಗೌಡರಿಗೆ ವಿಧಾನಸಭೆ ಟಿಕೆಟ್ ನೀಡಲು ಅರಸೀಕೆರೆ ಕಾಂಗ್ರೆಸ್ ನಾಯಕರ ವಿರೋಧ
ಇತ್ತೀಚೆಗೆ ಹಾಸನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕೆ.ಎಂ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದರು ಎಂದು ಹೆಸರು ಹೇಳಲಿಚ್ಛಿಸದ ಬೆಂಬಲಿಗರೊಬ್ಬರು ತಿಳಿಸಿದ್ದಾರೆ. ಆದರೆ ಶಿವಲಿಂಗೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಲು ಇಚ್ಛಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದರು.
ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಅರಸೀಕೆರೆಯಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಲು ಯೋಜಿಸಿದ್ದಾರೆ. ಶಿವಲಿಂಗೇಗೌಡ ಅವರು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದು, ಡಿಕೆಶಿ ಸಹ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ವಾಸ್ತವಾಂಶ ಬಹಿರಂಗಪಡಿಸುತ್ತೇನೆ ಎಂದರು.