ದೇವರು ಮತ್ತು ಹಿರಿಯರ ಆಶೀರ್ವಾದಕ್ಕಾಗಿ ಕಾಯುತ್ತೇನೆ: ಭವಾನಿ ರೇವಣ್ಣ
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾದ ಭವಾನಿ ರೇವಣ್ಣ ಅವರು ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಟಿಕೆಟ್ ವಿಚಾರದ ಬಗ್ಗೆ ಮಾತನಾಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.
Published: 27th January 2023 07:00 PM | Last Updated: 28th January 2023 02:57 PM | A+A A-

ಭವಾನಿ ರೇವಣ್ಣ
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾದ ಭವಾನಿ ರೇವಣ್ಣ ಅವರು ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಟಿಕೆಟ್ ವಿಚಾರದ ಬಗ್ಗೆ ಮಾತನಾಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಪಕ್ಷ ಇನ್ನೂ ಉಮೇದುವಾರಿಕೆಯನ್ನು ನಿರ್ಧರಿಸಿಲ್ಲ. ಅನೇಕ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದರು.
ಹಾಸನದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಬಸ್ತೇನಹಳ್ಳಿಯ ಮಾಸ್ತಿಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ, ಇಲ್ಲಿನ ಜನರು ಮತ್ತು ರಾಜಕೀಯ ಮುಖಂಡರ ಭಿನ್ನ ಹೇಳಿಕೆಗಳಿಗೆ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ, ಈಗ ಏನೂ ಮಾತನಾಡುವುದಿಲ್ಲ.ಈಗ ನಾನು ಏನೂ ಹೇಳಲು ಸಾಧ್ಯವಿಲ್ಲ, ದೇವರು ಮತ್ತು ಹಿರಿಯರ ಆಶೀರ್ವಾದಕ್ಕಾಗಿ ಕಾಯುತ್ತಿದ್ದೇನೆ ಎಂದರು.
ತಾವು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಶೀಘ್ರದಲ್ಲೇ ತಮ್ಮ ಹೆಸರನ್ನು ಮುಖಂಡರು ಪ್ರಕಟಿಸಲಿದ್ದಾರೆ ಎಂದು ಇತ್ತೀಚೆಗೆ ಭವಾನಿ ರೇವಣ್ಣ ಹೇಳಿದ್ದರು.
ಹೊಳೆನರಸೀಪುರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ಗಿಂತ ಸ್ಪರ್ಧಿಸಲು ಆಸಕ್ತಿ ಇದ್ದರೆ ಭವಾನಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ದಯವಿಟ್ಟು ಸಿ.ಟಿ.ರವಿ ಅವರನ್ನು ಕೇಳಿ, ಭವಿಷ್ಯದ ರಾಜಕೀಯವನ್ನು ನೋಡೋಣ ಎಂದು ಭವಾನಿ ಹೇಳಿದರು.
ಟೆಂಪಲ್ ರನ್ ನ್ನು ಸಕ್ರಿಯವಾಗಿ ಮುಂದುವರೆಸಿರುವ ಭವಾನಿ ಅವರು ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಗಳಿಂದ ನಿರಾಶೆಗೊಂಡಿಲ್ಲ ಎಂದರು. ದೇವಸ್ಥಾನದ ಬಳಿ ಜಮಾಯಿಸಿದ ಜನರು ಭವಾನಿ ರೇವಣ್ಣ ಅವರೇ ಹಾಸನದ ಭಾವಿ ಶಾಸಕ ಎಂದು ಭವಾನಿ ಪರ ಘೋಷಣೆಗಳನ್ನು ಕೂಗಿದರು. ಇದಕ್ಕೂ ಮುನ್ನ ಮಾಸ್ತಿಯಮ್ಮ ದೇವಸ್ಥಾನದ ಅರ್ಚಕರಿಗೆ ತಮ್ಮ ಮಾವ ಹೆಚ್.ಡಿ.ದೇವೇಗೌಡ, ಅತ್ತೆ ಚನ್ನಮ್ಮ, ಬಾವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಅವರ ಹೆಸರಿನಲ್ಲಿ ಅರ್ಚನೆ ಮಾಡುವಂತೆ ಕೋರಿದರು.
ಈ ವೇಳೆ ಹಾಜರಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ಹಾಗೂ ತಾಯಿ ಭವಾನಿ ಟೆಂಪಲ್ ರನ್ ಸೇರಿದಂತೆ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.