ಅಸೆಂಬ್ಲಿ ಚುನಾವಣೆ 2023: ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧೆ- ಎಎಪಿ
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದ್ದು, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಮುಖಂಡರಾದ ಅತಿಶಿ ಮಂಗಳವಾರ ತಿಳಿಸಿದರು.
Published: 31st January 2023 07:18 PM | Last Updated: 31st January 2023 07:47 PM | A+A A-

ಎಎಪಿ ಪಕ್ಷದ ಚಿಹ್ನೆ ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದ್ದು, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಮುಖಂಡರಾದ ಅತಿಶಿ ಮಂಗಳವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ' ನಮ್ಮ ಕ್ಲಿನಿಕ್ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಭರವಸೆಗಳು ಎಎಪಿಯ ನಕಲು ಎಂದು ಆರೋಪಿಸಿದರು. ಅಲ್ಲದೇ ವಿಧಾನಸಭಾ ಚುನಾವಣೆಗಾಗಿ ಕಾರ್ಯಸೂಚಿಯನ್ನು ಪಕ್ಷ ತಯಾರಿಸುತ್ತಿದೆ ಎಂದರು.
ಯೋಜನೆಗಳ ಅನುಷ್ಠಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಕಲು ಮಾಡುತ್ತಿರುವುದಾಗಿ ವಾಗ್ದಾಳಿ ನಡೆಸಿದ ಅವರು, ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ತನೆಲ್ಲಾ ಬಲದೊಂದಿಗೆ ಪಕ್ಷ ಹೋರಾಟ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಅಧಿಕಾರ ಮುಗಿಯುತ್ತಿರುವ ಸಂದರ್ಭದಲ್ಲಿ ವಿವೇಕಾ ಯೋಜನೆಯಡಿ ಶಾಲಾ ಕೊಠಡಿಗಳ ಅನುಷ್ಠಾನದ ಬಿಜೆಪಿ ಭರವಸೆ ಕುರಿತು ಅಶ್ಚರ್ಯ ವ್ಯಕ್ತಪಡಿಸಿದ ಅವರು, ಕಳೆದ ಐದು ವರ್ಷಗಳಲ್ಲಿ ಶಾಲಾ ಕೊಠಡಿಗಳನ್ನು ಏಕೆ ನಿರ್ಮಿಸಲಿಲ್ಲ ಎಂದು ಪ್ರಶ್ನಿಸಿದರು. ಇನ್ನೂ ಪ್ರತಿಪಕ್ಷ ಕಾಂಗ್ರೆಸ್ ಘೋಷಿಸಿರುವ 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಈಗಾಗಲೇ ದೆಹಲಿಯಲ್ಲಿ ಅನುಷ್ಠಾನಗೊಂಡಿದೆ ಎಂದರು.
ಜನರು ಭ್ರಷ್ಟಾಚಾರದಿಂದ ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಹೋರಾಟ ನಡೆಸಲು ಪಕ್ಷ ನಿರ್ಧರಿಸಿರುವುದಾಗಿ ತಿಳಿಸಿದರು.