
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಿಎಂ ಬೊಮ್ಮಾಯಿ
ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸೋಮವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದಾದ್ಯಂತ ಹೋಗಿ ಬಂದಿದ್ದೇನೆ. ಪ್ರಥಮ ಬಾರಿ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿ 140ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ. ಮಿಕ್ಕಿದ ಕ್ಷೇತ್ರಗಳಲ್ಲೂ ಗರಿಷ್ಠ ಪೈಪೋಟಿ ನೀಡಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದ್ದು, ಕಾಂಗ್ರೆಸ್‍ನವರು ಹತಾಶರಾಗಿ ಅವರ ವಿಫಲತೆ ಮುಚ್ಚಿಕೊಳ್ಳಲು ಸುಳ್ಳು ಭರವಸೆ ಕೊಡುತ್ತಿದ್ದಾರೆ. ಜೊತೆಗೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದೇವನಹಳ್ಳಿ ಪ್ರಮುಖ ಕ್ಷೇತ್ರ. ವಿಮಾನನಿಲ್ದಾಣ ಆದ ಬಳಿಕ ಅದರ ಪ್ರಾಮುಖ್ಯತೆ ಹೆಚ್ಚಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಅಲ್ಲಿ ಗೆಲ್ಲಲು ಬಯಸುತ್ತಿವೆ. ಹೊಸ ಶಕ್ತಿ ಜೋಡಣೆಯಿಂದ ದೇವನಹಳ್ಳಿ ಚುನಾವಣೆ ಪೈಪೋಟಿಯಿಂದ ಕೂಡಿರಲಿದೆ. ದೇವನಹಳ್ಳಿಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎಂದರು.
ಇದನ್ನೂ ಓದಿ: ಚಂದ್ರಶೇಖರ್ ರಿಂದ ರಾಹುಲ್ ಗಾಂಧಿವರೆಗೆ: ಜನತೆಯ ಗಮನ ಕೇಂದ್ರೀಕರಿಸಲು ರಾಜಕಾರಣಿಗಳು ನಡೆಸಿದ ಯಾತ್ರೆಗಳ ಸಂಪೂರ್ಣ ವಿವರ!
ನಿಮ್ಮೆಲ್ಲರ ಸೇರ್ಪಡೆ ಯೋಗ್ಯ ನಿರ್ಣಯ. ಇದು ಬದಲಾವಣೆಯ ಗಾಳಿಯ ದಿಕ್ಸೂಚಿ. ಕಾಂಗ್ರೆಸ್- ಜೆಡಿಎಸ್ ಆಡಳಿತದಿಂದ ಜನರು ಬೇಸತ್ತಿದ್ದರು. ನಮ್ಮ ಪಕ್ಷ ಬಂದ ಬಳಿಕ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ನೀಡಿದೆ. ಎಸ್‍ಸಿ, ಎಸ್‍ಟಿ ಸಮಾಜದ ಅಭ್ಯುದಯಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರೈತರು, ಯುವಕರು, ಮಹಿಳೆಯರ ವಿಶೇಷ ಯೋಜನೆಗಳನ್ನು ನಮ್ಮ ಪಕ್ಷ ಅನುಷ್ಠಾನಕ್ಕೆ ತಂದಿದೆ. ಇವುಗಳ ಬಗ್ಗೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಜನರ ಭಾವನೆಗಳಿಗೆ ಕಾರ್ಯಕರ್ತರು ಧ್ವನಿಯಾಗಿ ಮತ್ತೊಮ್ಮೆ ಬಿಜೆಪಿ ಸ್ಪಷ್ಟ ಬಹುಮತದಿಂದ ಆರಿಸಿ ಬಂದು ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.
ಕಳೆದ ಬಾರಿ ಪಿಳ್ಳಮುನಿಶಾಮಪ್ಪ ಅವರ ನೇತೃತ್ವದಲ್ಲಿ ದೊಡ್ಡ ತಂಡ ಬಿಜೆಪಿ ಸೇರಿತ್ತು. ಈ ಬಾರಿ ಮತ್ತಷ್ಟು ಕಾಂಗ್ರೆಸ್- ಜೆಡಿಎಸ್ ಪ್ರಮುಖರು ಸೇರಿದ್ದಾರೆ. ಇದನ್ನು ನೋಡಿದಾಗ ದೇವನಹಳ್ಳಿಯಲ್ಲಿ ಇವೆರಡು ಪಕ್ಷಗಳಲ್ಲಿ ಯಾರೂ ಪ್ರಮುಖರು ಉಳಿದಿಲ್ಲ ಎಂದು ಅನಿಸುತ್ತಿದೆ ಎಂದು ನುಡಿದರು. ದೇವನಹಳ್ಳಿ ಗೆಲುವಿಗೆ ಪಕ್ಷ ಶಕ್ತಿ ತುಂಬಲಿದೆ. ಮತ್ತು ಹೆಚ್ಚಿನ ಶ್ರಮ ಹಾಕಲಿದೆ. ನಾನೇ ದೇವನಹಳ್ಳಿಗೆ ಭೇಟಿ ಕೊಡಲಿದ್ದೇನೆ. ಅಲ್ಲೊಂದು ಬೃಹತ್ ರ್ಯಾಲಿ ಮಾಡೋಣ.
ನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದರು. ದೇವನಹಳ್ಳಿಯಲ್ಲಿ ವಿಜಯ ಪತಾಕೆ ಹಾರಿಸೋಣ; ಅಲ್ಲಿ ಗೆಲ್ಲಿಸಿಕೊಡಿ. ಕರ್ನಾಟಕದಲ್ಲಿ ಗೆಲ್ಲಿಸುವುದು ನನಗೆ ಗೊತ್ತಿದೆ ಎಂದು ತಿಳಿಸಿದರು.