ಏನೋ ಬದಲಾವಣೆಯಾಗುತ್ತದೆಂದು ಬಿಜೆಪಿ ಸೇರ್ಪಡೆಯಾಗಿದ್ದೆ, ಇವರಂಥ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ; ಎಚ್.ವಿಶ್ವನಾಥ್
ಏನೋ ಒಂದು ಬದಲಾವಣೆಯಾಗಬಹುದು ಎಂದು ಬಿಜೆಪಿ ಸೇರ್ಪಡೆಯಾಗಿದ್ದೆ. ಇವರಂಥ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ. ಶಾಲೆಗೆ ಕೇಸರಿ ಬಣ್ಣ ಬಳಿಯುತ್ತಿದ್ದಾರೆ.
Published: 31st January 2023 01:52 PM | Last Updated: 31st January 2023 05:06 PM | A+A A-

ಎಚ್. ವಿಶ್ವನಾಥ್
ಹುಬ್ಬಳ್ಳಿ: ಏನೋ ಒಂದು ಬದಲಾವಣೆಯಾಗಬಹುದು ಎಂದು ಬಿಜೆಪಿ ಸೇರ್ಪಡೆಯಾಗಿದ್ದೆ. ಇವರಂಥ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ. ಶಾಲೆಗೆ ಕೇಸರಿ ಬಣ್ಣ ಬಳಿಯುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಸರಿಯಾಗಿ ಪರೀಕ್ಷೆ ನಡಸುತ್ತಿಲ್ಲ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಎಲ್ಲ ಹುದ್ದೆಗಳ ಭರ್ತಿಗೆ ದುಡ್ಡು ಕೇಳುತ್ತಿದ್ದಾರೆ. ಇದನ್ನು ಸರ್ಕಾರ ಎನ್ನಲಾಗುತ್ತದೆಯೇ? ಎಂದು ಕಿಡಿಕಾರಿದರು.
ರಾಜಕಾರಣಿಗಳು ಕನ್ನಡ ಭಾಷೆಯನ್ನು ಕೊಲ್ಲುತ್ತಿದ್ದಾರೆ. ಜೊತೆಗೆ ನಾನು 50 ವರ್ಷಗಳಿಂದ ರಾಜಕಾರಣ ನೋಡುತ್ತಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಎಂದರೆ ಎಷ್ಟು ಹಣ ಇಟ್ಟಿದ್ದೀಯಾ ಎಂದು ಕೇಳುತ್ತಾರೆ. ಇಂದು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ. ಮೊದಲು ಪಕ್ಷ ದೊಡ್ಡದಿತ್ತು, ಆದರೆ ಇದೀಗ ನಾಯಕಾರಣ ರಾಜಕಾರಣ ಆಗಿದೆ. ಇದು ಮಾರಕ ಎಂದು ಹೇಳಿದರು.
ಪ್ರಜಾಪ್ರಭುತ್ವದ ಆತ್ಮವೇ ಚುನಾವಣೆ. ಆದರೆ, ಎಲ್ಲ ಪಕ್ಷದ ಮುಖಂಡರು ಮ್ಯಾಜಿಕ್ ನಂಬರ್ ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಮ್ಯಾಜಿಕ್ ನಂಬರ್ ನಿರ್ಣಯಿಸುವವರು ಮತದಾರರು. ಆದರೆ, ಬಿಜೆಪಿಗೆ ಯಾರು ಮತ ನೀಡುವುದಿಲ್ಲವೋ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತಿದೆ. ಇಂತಹ ಅಯೋಗ್ಯತನ ನನ್ನ ರಾಜಕೀಯ ಜೀವನದಲ್ಲಿ ಕಂಡಿಲ್ಲ. ಮತದಾರರ ಹಕ್ಕನ್ನೇ ಕಸಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಜನತಂತ್ರ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನವಿದು ಎಂದು ಆಕ್ರೋಶ ವ್ಯಕ್ಯಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಾರೆ. ನಾನು ಆರ್ಥಿಕವಾಗಿ ಸ್ಥಿತಿವಂತನಲ್ಲ. ಸೇವಾ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ. ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಅದು ಅವರ ವೈಯಕ್ತಿಕ ವಿಚಾರ ಎಂದರು.
ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ರಾಜಕಾರಣಿಗಳು ತಾಕತ್, ಧಮ್ ಎಂಬ ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾರಣ ಹೊಲಸು ಹಿಡಿದಿದೆ. ಇದು ರಿಪೇರಿ ಆಗಲೇಬೇಕು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಕಿಡಿಕಾರಿದರು.