ರಮೇಶ್ ಜಾರಕಿಹೊಳಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ
ರಮೇಶ ಅವರು ಯಾವ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂಬ ಸ್ಪಷ್ಟತೆ ಇಲ್ಲ. ಏನು ಮಾತನಾಡುತ್ತಿದ್ದೇನೆ ಎಂಬ ಅರ್ಥವೂ ಅಲ್ಲ. ಬರೀ ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.
Published: 31st January 2023 09:31 AM | Last Updated: 31st January 2023 04:53 PM | A+A A-

ಚನ್ನರಾಜ್ ಹಟ್ಟಿಹೊಳಿ
ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಹಗುರವಾಗಿ ಮಾತನಾಡುವ ಚಟವಿದೆ. ಆದರೆ, ಸಾರ್ವಜನಿಕರ ಮಧ್ಯೆ ಇರುವವರಿಗೆ ಮಾತಿನ ಮೇಲೆ ನಿಗಾ ಇರಬೇಕು. ಬೇರೊಬ್ಬರ ಮೇಲೆ ವೈಯಕ್ತಿಕ ಆರೋಪ ಮಾಡುವ ಮುನ್ನ ಎಚ್ಚರಿಕೆ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ರಮೇಶ ಅವರು ಯಾವ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂಬ ಸ್ಪಷ್ಟತೆ ಇಲ್ಲ. ಏನು ಮಾತನಾಡುತ್ತಿದ್ದೇನೆ ಎಂಬ ಅರ್ಥವೂ ಅಲ್ಲ. ಬರೀ ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.
‘ಶಾಸಕರ ಬಗ್ಗೆ ಅವರು ಕೀಳುಪದ ಬಳಸಿದ್ದಾರೆ. ನಾನು ಮತ್ತು ನನ್ನ ಅಕ್ಕ ಸುಶಿಕ್ಷಿತರಿದ್ದೇವೆ. ರಮೇಶ ಅವರಂತೆ ಅಸಂಬದ್ಧ ಪದ ಬಳಸುವುದಿಲ್ಲ. ಬೇಜವಾಬ್ದಾರಿ ಮಾತನಾಡುವ ಬದಲು ಜನರ ಮುಂದೆ ದಾಖಲೆ ಇಟ್ಟುಬಿಡಿ’ ಎಂದೂ ಹೇಳಿದರು.
‘ಅವರ ಸಿ.ಡಿ ಹೊರಬಿದ್ದು ಎರಡು ವರ್ಷವಾಗಿದೆ. ಇಲ್ಲಿಯವರೆಗೆ ಸಿಬಿಐಗೆ ಒಪ್ಪಿಸಿಲ್ಲ. ಈಗ ಏಕೆ ತಾವೇ ಮುಂದೆ ಬಂದು ಸಿಬಿಐಗೆ ಒಪ್ಪಿಸಲು ಹೇಳುತ್ತಿದ್ದಾರೆ? ಚುನಾವಣೆ ಬಂದಾಗ ಇಂಥ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಬಿಜೆಪಿ ರೂಢಿ’ ಎಂದೂ ಆರೋಪಿಸಿದರು.
ರಮೇಶ ಜಾರಕಿಹೊಳಿ ಸುಳ್ಳು ಆರೋಪ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮೊನ್ನೆ ಸೂಳೇಬಾವಿಯಲ್ಲಿ ಪ್ರತಿ ಓಟಿಗೆ .6 ಸಾವಿರ ಕೊಡುವುದಾಗಿ ಹೇಳಿದ್ದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ., ಮರು ದಿನ ನಾನು ಹಾಗೆ ಹೇಳಿಯೇ ಇಲ್ಲ ಎಂದರು. ಸೌಭಾಗ್ಯಲಕ್ಷ್ಮೇ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಮಾಡುವುದಾಗಿ ಹೇಳಿ ಸಾಲ ಎತ್ತಿ ಘಟಕವನ್ನೇ ಮಾಡಲಿಲ್ಲ. ಈಗ ಕಾರ್ಖಾನೆ ದಿವಾಳಿಯಾಗಿದೆ ಎಂದು ಸಾರಿದ್ದಾರೆ. ಇಂಥವರಿಗೆ ನಮ್ಮ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
‘ರಮೇಶ ಜಾರಕಿಹೊಳಿ ಕಾಂಗ್ರೆಸ್ ಬಿಡುವಾಗ ನಮ್ಮನ್ನೂ ಕರೆದರು. ಆದರೆ, ನಾವು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದೆವು. ಬಿಜೆಪಿ ಸೇರಬೇಡಿ ಎಂದು ಅವರಿಗೂ ಕೇಳಿಕೊಂಡೆವು. ಆಗ ಅವರ ಮಾತಿಗೆ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕೆ ನಮ್ಮ ಮೇಲೆ ಇಷ್ಟು ದ್ವೇಷ ಸಾಧಿಸುತ್ತಿದ್ದಾರೆ’ ಎಂದರು.
‘ನಮ್ಮ ಹರ್ಷ ಶುಗರ್ಸ್‌ಗೆ ವ್ಯವಹಾರಗಳು ಪಾರದರ್ಶಕವಾಗಿವೆ. ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಅವರ ಆರೋಪದಲ್ಲಿ ಸತ್ಯವಿಲ್ಲ. ಆದರೆ, ರಮೇಶ ಅವರ ಒಡೆತನದ ಸೌಭಾಗ್ಯಲಕ್ಷ್ಮೀ ಶುಗರ್ಸ್‌ನ ದಾಖಲೆಗಳು ಇಲ್ಲ. ಎಥೆನಾಲ್ ಘಟಕ ಪ್ರಾಂಭಿಸುತ್ತೇನೆ ಎಂದು ಹೇಳಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ್ದಾರೆ. ದಿವಾಳಿ ಆಗಿದ್ದೇವೆ ಎಂದು ಇವರೇ ಬ್ಯಾಂಕಿಗೆ ಬರೆದುಕೊಟ್ಟಿದ್ದಾರೆ’ ಎಂದೂ ಆರೋಪಿಸಿದರು.