'ಪ್ರಧಾನಿ, ರಾಷ್ಟ್ರಪತಿ ಮಾಡ್ತೀನಿ ಅಂದ್ರೂ ಬಿಜೆಪಿ ಸೇರಲ್ಲ; ನನ್ನ ಹೆಣವೂ ಆರ್‌ಎಸ್‌ಎಸ್ ಜೊತೆ ಹೋಗಲ್ಲ; ಗೋಡ್ಸೆ ಆರಾಧಿಸುವವರು ಹಿಂದೂಗಳೇ?'
ಬಿಜೆಪಿಯವರು ನನ್ನನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮಾಡ್ತೀವಿ ಎಂದರೂ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರುವುದಿಲ್ಲ. ನನ್ನ ಹೆಣವೂ ಅವರೊಂದಿಗೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Published: 31st January 2023 08:58 AM | Last Updated: 31st January 2023 04:54 PM | A+A A-

ಸಿದ್ದರಾಮಯ್ಯ
ರಾಮನಗರ: ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ ಮುಂದುವರಿಸಿದ್ದಾರೆ, ಈ ಪಕ್ಷಗಳಿಗೆ ಯಾವುದೇ ಸಿದ್ಧಾಂತ, ವೈಚಾರಿಕತೆ ಇಲ್ಲ. ಬಿಜೆಪಿಯವರು ನನ್ನನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮಾಡ್ತೀವಿ ಎಂದರೂ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರುವುದಿಲ್ಲ. ನನ್ನ ಹೆಣವೂ ಅವರೊಂದಿಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸುತ್ತವೆ. ಜೆಡಿಎಸ್‌ಗೆ ಯಾವುದೇ ಸಿದ್ಧಾಂತ ಅಥವಾ ಅರ್ಹತೆ ಇಲ್ಲ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಅವರು ಕೈಜೋಡಿಸುತ್ತಾರೆ ಎಂದು ತಿಳಿಸಿದರು.
‘ನನ್ನನ್ನು ಬಿಜೆಪಿ ಹಿಂದೂ ವಿರೋಧಿ ಎಂದು ಹೇಳುತ್ತಿದೆ. ಸಿ.ಟಿ.ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಎನ್ನುತ್ತಿದ್ದಾರೆ. ಆದರೆ ಗಾಂಧೀಜಿ ನಿಜವಾದ ಹಿಂದುವಾಗಿದ್ದರು. ಅಂಥ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುವವರನ್ನು ಹಿಂದೂಗಳು ಎನ್ನಲು ಆದೀತೆ’ ಎಂದು ಪ್ರಶ್ನಿಸಿದರು. ‘ಇವರಿಗೆ ಗೌರವವಿದೆಯೇ? ಇಂಥವರೊಂದಿಗೆ ಕೈಜೋಡಿಸಿದವರಿಗೆ ಘನತೆ ಇರಲು ಸಾಧ್ಯವೇ’ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಮಕ್ಕಳೂ ಬಿಜೆಪಿಗೆ ಬರ್ತಾರೆ: ನಳಿನ್ ಕುಮಾರ್ ಕಟೀಲ್ ಭವಿಷ್ಯ
ತಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಕುರಿತು ಪ್ರಸ್ತಾಪಿಸಿದ ಅವರು, ‘ಎಲ್ಲರಿಗೂ ಆಹಾರ ಭದ್ರತೆ ನೀಡಿದೆ. ಬಿಜೆಪಿಗೆ ಈ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾನು ಅನ್ನಭಾಗ್ಯ ಯೋಜನೆ ಜಾರಿಮಾಡಿದೆ. ಬಸವಜಯಂತಿಯಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಆಹಾರ ಭದ್ರತೆ ಯೋಜನೆಗೆ ಸಹಿ ಹಾಕಿದೆ. ರೈತರು ಮತ್ತು ಪಶುಪಾಲಕರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಮೊದಲು ತಿಂಗಳಿಗೆ 7 ಕೆಜಿ ಅಕ್ಕಿ ಸಿಗುತ್ತಿತ್ತು. ಆದರೆ ಈಗ ಬಿಜೆಪಿ ಇದನ್ನು 5 ಕೆಜಿಗೆ ಇಳಿಸಿದೆ. ಮುಂದೆ ನಾವು ಅಧಿಕಾರಕ್ಕೆ ಬಂದಾಗ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000 ರೂಪಾಯಿ ವೇತನ ಕೊಡುತ್ತೇವೆ ಎಂದು ಘೋಷಿಸಿದರು.