ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ; ಮುಂದಿನ ದಿನಗಳಲ್ಲಿ ಸ್ವಂತ ಬಲದಲ್ಲಿ ಹೋರಾಟ: ಎಚ್.ಡಿ ದೇವೇಗೌಡ
ಲೋಕಸಭೆ ಚುನಾವಣೆಗೆ ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ. ಸ್ವಂತ ಬಲದಿಂದ ಹೋರಾಟ ಮಾಡುವ ಶಕ್ತಿ ಇದೆ. ಸದ್ಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ,
Published: 06th June 2023 02:06 PM | Last Updated: 06th June 2023 07:33 PM | A+A A-

ಎಚ್.ಡಿ ದೇವೇಗೌಡ
ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ. ಸ್ವಂತ ಬಲದಿಂದ ಹೋರಾಟ ಮಾಡುವ ಶಕ್ತಿ ಇದೆ. ಸದ್ಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ, ನಮ್ಮ ಗಮನ ಅದರ ಮೇಲಿರಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಜತೆ ಕೈಜೋಡಿಸದೇ ಇರುವ ಯಾವುದಾದರೂ ಒಂದು ಪಕ್ಷವನ್ನು ತೋರಿಸಿ. ಆ ನಂತರ ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುವೆ ಎಂದು ಹೇಳಿದರು.
ಇದನ್ನೂ ಓದಿ: 'ಜೆಡಿಎಸ್ ಪಕ್ಷ ವಿಸರ್ಜನೆ ಹೇಳಿಕೆ ಕೊಟ್ಟ ಸಂಸ್ಕಾರಹೀನರ ಅಜ್ಞಾನಕ್ಕೆ ನನ್ನ ಪ್ರಗಾಢ ಸಾಂತ್ವನ- ನಾನು ಹೇಳುವುದು ಇಷ್ಟೇ'
ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಸುತ್ತಿರುವ ಪ್ರಯತ್ನದಲ್ಲಿ ಜೆಡಿಎಸ್ ಕೈ ಜೋಡಿಸಲಿದೆಯೆ? ಎಂಬ ಪ್ರಶ್ನೆಗೆ ಅವರು ಈ ರೀತಿ ಮರು ಸವಾಲು ಹಾಕಿದರು. ಎಲ್ಲ ಪಕ್ಷಗಳೂ ಬಿಜೆಪಿ ಜತೆ ನೇರವಾಗಿ ಅಥವಾ ಪರೋಕ್ಷವಾಗಿ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರೂ ಅವರಲ್ಲಿ ಸೇರಿದ್ದಾರೆ ಎಂದರು.
ಜೆಡಿಎಸ್ ಈಗ ಲೋಕಸಭಾ ಚುನಾವಣೆ ಬಗ್ಗೆ ಚಿಂತಿಸುವುದಿಲ್ಲ. ಈಗ ಪಕ್ಷದ ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳಿವೆ. ಈ ಚುನಾವಣೆಗಳಲ್ಲಿ ಪಕ್ಷ ಪಡೆಯುವ ಜನಬೆಂಬಲ ಆಧರಿಸಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ? ಯಾವ ಕ್ಷೇತ್ರಗಳಲ್ಲಿ? ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು. ಚುನಾವಣೆಗಳ ಬಗ್ಗೆ ನಾವು ತಯಾರಿ ಮಾಡಬೇಕು. ಪಕ್ಷ ಉಳಿಯಬೇಕಾದರೇ ಏನು ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ಪಕ್ಷ ಸಂಘಟನೆ ಬಗ್ಗೆ ನಮ್ಮ ಮುಖಂಡರ ಜತೆ ಚರ್ಚೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: '1999ರ ನಂತರ ಲಿಂಗಾಯತರು ನಮ್ಮೊಂದಿಗಿಲ್ಲ: ಮುಸ್ಲಿಮರು ನಿತೀಶ್ ಕುಮಾರ್ ಬೆಂಬಲಿಸುತ್ತಿರುವುದು ಅಚ್ಚರಿ!'
'ನನಗೆ ಈಗ 91 ವರ್ಷ ವಯಸ್ಸು. ಈಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.