ಪುಟ್ಟರಂಗಶೆಟ್ಟಿ ಯೂ ಟರ್ನ್: ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ
ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿದ್ದರಾಮಯ್ಯನಯವರ ಸೂಚನೆ ಮೇರೆಗೆ ಉಪಸಭಾಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದೇನೆ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಹೇಳಿದರು.
Published: 08th June 2023 01:52 PM | Last Updated: 08th June 2023 01:52 PM | A+A A-

ಪುಟ್ಟರಂಗ ಶೆಟ್ಟಿ
ಚಾಮರಾಜನಗರ: ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿದ್ದರಾಮಯ್ಯನಯವರ ಸೂಚನೆ ಮೇರೆಗೆ ಉಪಸಭಾಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದೇನೆ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 'ಆರಂಭದಲ್ಲಿ ಹುದ್ದೆ ಬೇಡ ಎಂದಿದ್ದು ನಿಜ. ನಿಗಮ ಯಾವುದಾದರೂ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. 'ಒಂದು ವರ್ಷ ಉಪಸಭಾಧ್ಯಕ್ಷ ಸ್ಥಾನ ನಿರ್ವಹಿಸು. ಆ ನಂತರ ಸಚಿವ ಸ್ಥಾನ ನೀಡಲಾಗುವುದು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಹುದ್ದೆ ಒಪ್ಪಿಕೊಂಡಿದ್ದೇನೆ' ಎಂದರು.
ಈ ಹಿಂದೆ ಸ್ಥಾನ ನಿರಾಕರಿಸಿದ್ದೀರಲ್ಲ ಎಂದು ಕೇಳಿದ್ದಕ್ಕೆ, 'ನಾನು ಕಾಂಗ್ರೆಸ್ ಕಟ್ಟಾಳು. ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್, ವರಿಷ್ಠರ ಸೂಚನೆಯನ್ನು ಪಾಲಿಸಲೇಬೇಕಾಗುತ್ತದೆ' ಎಂದರು. ಕೊನೆ ಕ್ಷಣದವರೆಗೂ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಕಡೆ ಹಂತದಲ್ಲಿ ಸಚಿವ ಸ್ಥಾನ ಸಿಗದೇ ಇದ್ದಾಗ ಬೇಸರವಾಗುತ್ತದೆ. ಆದರೆ, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಪುಟ್ಟರಂಗಶೆಟ್ಟಿ ಉತ್ತರಿಸಿದರು.