ಕರ್ನಾಟಕ ಯಾರ ಎಟಿಎಂ ಆಗಿದೆ?: ಅಮಿತ್ ಶಾಗೆ ಕುಮಾರಸ್ವಾಮಿ ಪ್ರಶ್ನೆ

ಲೋಕಾಯುಕ್ತ ದಾಳಿಯಲ್ಲಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಬರೋಬ್ಬರಿ 8.12 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ...
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಬರೋಬ್ಬರಿ 8.12 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಮರಾಜ್ಯವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷ ಕಮೀಷನ್ ರಾಜ್ಯ ಮಾಡಿದೆ. ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ ಎಂದು ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಮಿತ್ ಶಾ ಅವರೇ ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗಂಡಾಂತರ ಮಾಡುವುದಾ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರಕಾರ 40% ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ ಸಾಬೂನು ಕಾರ್ಖಾನೆಯನ್ನು 40% ಕಮೀಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ? ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com