ಬೆಂಗಳೂರು: ಕರುನಾಡನ್ನು ಕಮಿಷನ್ ರಾಜ್ಯವಾಗಿ ಮಾಡಿದ ಅಪಕೀರ್ತಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೇರುತ್ತದೆ ಎಂದು ಜೆಡಿಎಸ್ ಕಿಡಿಕಾರಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ರಾಜ್ಯ ಬಿಜೆಪಿ ಸರ್ಕಾರ ಕಮಿಷನ್ ದಂಧೆಯ ರಾಜ್ಯವಾಗಿ ಕರ್ನಾಟಕವನ್ನು ಮಾರ್ಪಡು ಮಾಡಿರುವುದು ಅಸಹ್ಯದ ಪರಾಕಷ್ಟೆ. ಜನಸೇವೆಯನ್ನು ಕೊಳಚೆ ಮಾಡಿರುವುದೇ ಇವರ ಸಾಧನೆ ಎಂದು ಟೀಕಾ ಪ್ರಹಾರ ನಡೆಸಿದೆ.
ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಕಮಿಷನ್ ದಂಧೆ ಶುರು ಮಾಡಿದ ಮಹಾಪುರುಷರು ಇವರೇ ಅಲ್ಲವೆ? ಇವೆರೆಡು ಪಕ್ಷಗಳ ನಾಟಕವನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ನಮ್ಮ ರಾಜ್ಯ ಬರೀ ಭ್ರಷ್ಟಾಚಾರದ ಕುಖ್ಯಾತಿಯ ಭಾರಕ್ಕೆ ನಲುಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮಗ ಪ್ರಶಾಂತನ ಮನೆಯಲ್ಲಿ 8 ಕೋಟಿ ರೂಪಾಯಿ ಸಿಕ್ಕಿದೆ. ರಾಜ್ಯ ಬಿಜೆಪಿ ಸರ್ಕಾರದ ಸಚಿವರ ಮನೆಯಲ್ಲಿ ಇನ್ನೂ ಎಷ್ಟು ದುಡ್ಡು ಸಿಗಬಹುದು? ಇವರೆಲ್ಲರ ಕಮಿಷನ್ ಹಣ ಯಾರೆಲ್ಲರ ಹುಂಡಿಗೆ ಹೋಗಲು ಸಿದ್ಧವಾಗುತ್ತಿದೆ? ರಾಜ್ಯ ಪ್ರವಾಸಕ್ಕೆ ಬಂದಿರುವ ಅಮಿತ್ ಶಾ ಅವರೇ ಉತ್ತರಿಸಬೇಕಿದೆ ಎಂದಿದೆ.
ಅಂದಹಾಗೆ, ಕನ್ನಡಿಗರಿಗೆ ಒಂದು ಬಲವಾದ ಸಂದೇಹ ಮೂಡುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳ ದೆಹಲಿ ನಾಯಕರು ಯಾವ ಕಾರಣಕ್ಕೆ ರಾಜ್ಯಕ್ಕೆ ಪದೇ ಪದೇ ಬರುತ್ತಾರೆ? ಕಮಿಷನ್ ನಿಂದ ಪಡೆದ ಪಾಪದ ಹಣ ತೆಗೆದುಕೊಂಡು ಹೋಗಲು ರಾಜ್ಯ ಸುತ್ತುತ್ತಾರೆಯೆ? ನಮ್ಮ ರಾಜ್ಯವೇನು ಎಟಿಯಂ ಯಂತ್ರವಾ? ಎಂದು ಪ್ರಶ್ನಿಸಿದೆ.
Advertisement