ಕೊಳ್ಳೇಗಾಲ: ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ  ಜಿ.ಎನ್.ನಂಜುಂಡಸ್ವಾಮಿ ಕಾಂಗ್ರೆಸ್ ಸೇರಲು ಮೂಹೂರ್ತ ಫಿಕ್ಸ್

'ಐದಾರು ತಿಂಗಳಿಂದ ಬಿಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಮುಜುಗರದ ವಾತಾವರಣ ನಿರ್ಮಾಣವಾಗಿದ್ದು, ಮಾನಸಿಕವಾಗಿ ತುಂಬಾ ನೋವಾಗಿದೆ.
ಜಿ.ಎನ್ ನಂಜುಂಡಸ್ವಮಿ
ಜಿ.ಎನ್ ನಂಜುಂಡಸ್ವಮಿ

ಚಾಮರಾಜನಗರ: ಕೊಳ್ಳೇಗಾಲದ ಮುಖಂಡ, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.

ನಗರದಲ್ಲಿ ಸೋಮವಾರ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿ ನಡೆಸಿದ ನಂಜುಂಡಸ್ವಾಮಿ, 'ಐದಾರು ತಿಂಗಳಿಂದ ಬಿಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಮುಜುಗರದ ವಾತಾವರಣ ನಿರ್ಮಾಣವಾಗಿದ್ದು, ಮಾನಸಿಕವಾಗಿ ತುಂಬಾ ನೋವಾಗಿದೆ. ನನ್ನ ಬೆಂಬಲಿಗರಿಗೂ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪಕ್ಷ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಭಾನುವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ‌ಕುಮಾರ್ ಕಟೀಲ್ ಅವರಿಗೆ ಸಲ್ಲಿಸಿದ್ದೇನೆ' ಎಂದರು.

'ನಾನು 33 ವರ್ಷಗಳಿಂದ ಸ್ವಾಭಿಮಾನಿಯಾಗಿ, ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ನನಗಾಗಿರುವ ನೋವನ್ನು ಬಿಜೆಪಿಯ ಜಿಲ್ಲಾ ಘಟಕದ ಮುಖಂಡರು ಹಾಗೂ ರಾಜ್ಯದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಆದರೆ, ಯಾರೂ ಈ ಬಗ್ಗೆ ಗಮನಹರಿಸಲಿಲ್ಲ' ಎಂದು ದೂರಿದ್ದಾರೆ.

ಇಷ್ಟಾದರೂ ಬಿಜೆಪಿ ನಾಯಕರು, ಸೌಜನ್ಯಕ್ಕೂ ಜಿಎನ್‌ಎನ್ ಅವರನ್ನು ಸಂಪರ್ಕಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಸಮಪರ್ಕವಾದ ಪ್ರಯತ್ನ ಮಾಡಿಲ್ಲ. ಇದಕ್ಕೆ ಪೂರಕವೆಂಬಂತೆ ಶನಿವಾರ ಸಂತೇಮರಹಳ್ಳಿ ಐಬಿಯಲ್ಲಿ ಯಳಂದೂರಿನ ಬೆಂಬಲಿಗರ ಸಭೆ ನಡೆಸಿರುವ ಜಿ.ಎನ್.ನಂಜುಂಡಸ್ವಾಮಿ, ಕ್ಷೇತ್ರದ ಶಾಸಕ ಎನ್.ಮಹೇಶ್ ಹಾಗೂ ಬಿಜೆಪಿ ರಾಜ್ಯ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ.

ಜಿ.ಎನ್.ನಂಜುಂಡಸ್ವಾಮಿ ಅವರು ಮೂಲತಃ ಬಿಜೆಪಿಯಿಂದ ರಾಜಕೀಯ ಆರಂಭಿಸಿದವರು. 1994ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಕಾಂಗ್ರೆಸ್ ಸೇರಿ 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ್ಯಂತ ಉತ್ತಮ ಆಡಳಿತ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com