2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲಿವೆ: ಮಲ್ಲಿಕಾರ್ಜುನ ಖರ್ಗೆ

2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದರು.
ಕೊರಟಗೆರೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ.
ಕೊರಟಗೆರೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ.

ಕೊರಟಗೆರೆ: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದರು.

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ತುಮಕೂರಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಅಂದಿನ ರಕ್ಷಣಾ ಸಚಿವ ಎಕೆ ಆಂಟನಿ ಮಂಜೂರು ಮಾಡಿದ್ದರು. ತಾವು ಮಾಡದ ಕೆಲಸಕ್ಕೆ ಕ್ರೆಡಿಟ್ ಗಳನ್ನು ಮೋದಿ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ವಿರೋಧ ಪಕ್ಷಗಳು ಮೋದಿ ವಿರುದ್ಧ ಕೈಜೋಡಿಸಬೇಕು ಎಂದು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಜೀವ್ ಭವನವನ್ನು ಉದ್ಘಾಟಿಸಿದರು. ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ಬಳಕೆ ಮಾಡುತ್ತಿದ್ದಾರೆಂದು ಪ್ರಧಾನಿ  ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು,

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಮಣಿಪುರದಲ್ಲಿ ಮಾಡಿದಂತೆ ಆಡಳಿತಾರೂಢ ಸರ್ಕಾರಗಳನ್ನು ಕಿತ್ತೊಗೆಯಲು ಅವರು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಿಜೆಪಿ ಶಾಸಕರೊಬ್ಬರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾದಾಗ ಐಟಿ ಮತ್ತು ಇಡಿ ಏನು ಮಾಡುತ್ತಿದ್ದವು? ಎಂದು ಪ್ರಶ್ನಿಸಿದರು.

ಬಳಿಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ಜನತೆ ಬಳಿ ಮನವಿ ಮಾಡಿಕೊಂಡ ಅವರು, ಶಾಲಾ ಸಮವಸ್ತ್ರ ಮತ್ತು ಆಹಾರ ಪದ್ಧತಿಯಂತಹ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹಸ್ತಕ್ಷೇಪ ಮಾಡುತ್ತಿವೆ. "ನಾನು ಸಂಸತ್ತಿನಲ್ಲಿ ಮೋದಿಯವರ ಉದ್ಯೋಗ ಭರವಸೆಗಳ ಬಗ್ಗೆ ಪ್ರಶ್ನೆ ಎತ್ತಿದಾಗ, ನನ್ನ ಭಾಷಣದಲ್ಲಿ ಯಾವುದೇ ಅಸಂಸದೀಯ ಪದಗಳಿಲ್ಲದಿದ್ದರೂ ಅರ್ಧದಷ್ಟು ಭಾಷಣವನ್ನು ಹೊರಹಾಕಲಾಯಿತು ಎಂದು ಆಱೋಪಿಸಿದರು.

ಈ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು. ಆದರೆ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ಹಲವರ ಹುಬ್ಬೇರುವಂತೆ ಮಾಡಿತ್ತು.

ಪೂರ್ವ ನಿಗದಿತ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಲು ಅರಸೀಕೆರೆಯಲ್ಲಿದ್ದರೂ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಖಂಡಿತವಾಗಿಯೂ ತಪ್ಪು ಸಂದೇಶವನ್ನು ರವಾನಿಸಿದೆ ಎಂದು ಕೊರಟಗೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ನಾಯಕರು ಹೇಳಿದ್ದಾರೆ.

ಸಿದ್ದರಾಮಯ್ಯನವರ ಅನುಪಸ್ಥಿತಿಯ ನಡುವೆಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಯಿತು'' ಎಂದು ಕಾಂಗ್ರೆಸ್ ಮುಖಂಡ ಭಾನುಪ್ರಕಾಶ್ ಸಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com