
ಜೆಡಿಎಸ್ ನಾಯಕ ರೇವಣ್ಣ
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೊಂದಲ ಮುಂದುವರಿದಿದ್ದು, ಇದೀಗ ಕ್ಷೇತ್ರದಲ್ಲಿ ಹೊಸ ಹೆಸರು ಭಾರಿ ಸದ್ದು ಮಾಡುತ್ತಿದೆ.
ಎಚ್.ಪಿ.ಸ್ವರೂಪ್ ಅವರ ಉಮೇದುವಾರಿಕೆಯನ್ನು ಸರಿದೂಗಿಸಲು ಒಕ್ಕಲಿಗ ಸಮುದಾಯದ ಉಪಜಾತಿಯಾದ ದಾಸವೊಕ್ಕಲಿಗದಿಂದ ಪಕ್ಷದ ಹಿರಿಯ ನಾಯಕ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕೆ.ಎಂ.ರಾಜೇಗೌಡ ಅವರ ಬಗ್ಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ವಾಣಿಜ್ಯ ಸಂಸ್ಥೆಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರಾಜೇಗೌಡ ಬಗ್ಗೆ ಚರ್ಚೆ ನಡೆಯುತ್ತಿದೆ.
ಹಾಸನದ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಬದಲಾದ ಸನ್ನಿವೇಶದಲ್ಲಿ ಕೆ.ಎಂ.ರಾಜೇಗೌಡ ಅವರನ್ನು ಹಾಸನದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ. ಎಚ್.ಡಿ.ರೇವಣ್ಣ ಅವರು ಕೆ.ಎಂ.ರಾಜೇಗೌಡ ಅವರೊಂದಿಗೆ ಈಗಾಗಲೇ ಎರಡು ಬಾರಿ ಗೌಪ್ಯವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಹಾಸನ: ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ -ರೇವಣ್ಣ ಮಾತುಕತೆ; ಕುತೂಹಲ ಮೂಡಿಸಿದ ಭೇಟಿ
ಇನ್ನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ ಕೆ.ಎಂ.ರಾಜೇಗೌಡ ಅವರು ಹಾಸನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಟೆಂಪಲ್ ರನ್ ಆರಂಭಿಸಿದ್ದಾರೆ. ನೀರುಬಾಗಿಲು ಆಂಜನೇಯ, ಹಾಸನಾಂಬ, ಹಾಸನದ ಸಿದ್ದೇಶ್ವರ ದೇವಸ್ಥಾನ ಹಾಗೂ ಹಾಸನದ ಬೈಲಹಳ್ಳಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ಎಚ್.ಡಿ.ರೇವಣ್ಣ ಪ್ರಸ್ತಾಪಿಸಿದ ರಾಜೇಗೌಡ ಅವರ ಉಮೇದುವಾರಿಕೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಬಳಿಯೂ ಕೆ.ಎಂ.ರಾಜೇಗೌಡರ ಸಾಧಕ-ಬಾಧಕಗಳ ಬಗ್ಗೆ ಎಚ್.ಡಿ.ರೇವಣ್ಣ ಚರ್ಚೆ ನಡೆಸಿದ್ದಾರೆ. ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಭವಾನಿ ರೇವಣ್ಣ ಮತ್ತು ಎಚ್‌ಪಿ ಸ್ವರೂಪ ಗೌಡ ಇಬ್ಬರೂ ಎಚ್‌ಡಿ ಕುಮಾರಸ್ವಾಮಿ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಟೆಂಪಲ್ ರನ್ ಅನ್ನು ದಿಢೀರ್ ನಿಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.