ಬಿಜೆಪಿ ತೊರೆಯಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಸಚಿವ ವಿ. ಸೋಮಣ್ಣ

ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ.
ಸಚಿವ ವಿ.ಸೋಮಣ್ಣ.
ಸಚಿವ ವಿ.ಸೋಮಣ್ಣ.

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್​​ಗೆ ಹೋಗುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನನ್ನನ್ನು ಸಂಪರ್ಕಿಸಿಲ್ಲ. ನಾನು ಕಾಂಗ್ರೆಸ್​ಗೆ ಹೋಗುತ್ತೇನೆಂದು ವದಂತಿ ಹಬ್ಬಿಸುತ್ತಿದ್ದಾರೆಂದು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ನಾಯಕತ್ವದಲ್ಲಿ ಕೆಲಸ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ನಾನು ಬಿಜೆಪಿ ನಾಯಕ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಸೇರ್ಪಡೆಯಾಗುವುದಿಲ್ಲ.ಬಿಜೆಪಿಯಲ್ಲಿಯೇ ಇರುತ್ತೇನೆ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ.  ಮಂತ್ರಿಯಾಗಿ ಯಾರಿಗೂ ಅಪಚಾರ ಮಾಡುವುದಿಲ್ಲ. ಬಿಜೆಪಿಯಲ್ಲಿ ನನಗೆ ಗೌರವ ನೀಡಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ, ಪಕ್ಷದಲ್ಲಿ ಕೆಲಸ ಮಾಡಿಕೊಂಡು ಮುಂದುವರೆಯುತ್ತೇನೆಂದು ಹೇಳಿದರು.

ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಆರೋಗ್ಯವಾಗಿ ಇರಲಿ. ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿ ನಮ್ಮ ನಾಯಕರು. ನಾನು ಬಿಜೆಪಿಗೆ ಬರಲು ಅನಂತ್ ಕುಮಾರ್ ಕಾರಣ. ಇನ್ನು ಮುಂದಾದರೂ ತೇಜೋವಧೆ ಮಾಡಬೇಡಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಚೆನ್ನಾಗಿರಲಿ ಎಂದು ತಿಳಿಸಿದರು.

ಬಳಿಕ ಡಿಕೆ.ಶಿವಕುಮಾರ್ ಜೊತೆಗಿನ ಪೋಟೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಡಿಕೆ.ಶಿವಕುಮಾರ್ ಜೊತೆಗೆ ಹರಿದಾಡುತ್ತಿರುವ ಫೋಟೋ ಹಳೆಯದು. ಡಿಕೆಶಿ ನಮ್ಮ ಊರಿನವರು. ಮಾಧ್ಯಮಗಳು ನನ್ನ ಬಗ್ಗೆ ಸುದ್ದಿ ಹಾಕಿ ಮಜಾ ತೆಗೆದುಕೊಳ್ಳುತ್ತಿದ್ದಾರೆಂದು ಕಿಡಿಕಾರಿದರು.

ಯಾರು ಕರೀತಾರೆ ನನಗೆ ಕಾಂಗ್ರೆಸ್‍ನಲ್ಲಿ? ಡಿಕೆಶಿ ಜೊತೆ ವಿಮಾನದಲ್ಲಿ ಬಂದರೆ ಆಹ್ವಾನ ಕೊಟ್ಟರು ಎಂಬ ಅರ್ಥವೇ ಎಂದು ಪ್ರಶ್ನಿಸಿದರು.

ನಂತರ ಅರುಣ್ ಸೋಮಣ್ಣ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಆ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅರುಣ್ ಸೋಮಣ್ಣ ಪಕ್ಷದ ವಿರುದ್ಧ ನಡೆದುಕೊಂಡರೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಿ. ನನ್ನ ಮಗ ಡಾಕ್ಟರ್. ಎಳೆ ಮಗು ಅಲ್ಲ. ಆತ ಮಾತಾಡಿರುವುದಕ್ಕೂ ನನಗೂ ಸಂಬಂಧ ಇಲ್ಲ ಎಂದರು.

ರಾಜಕೀಯದಲ್ಲಿ ಯಾರು ಯಾರೂ ಶತ್ರುಗಳಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಹೋಗ್ತೀವಿ, ಕೆಲಸ ಮಾಡ್ತೀವಿ. ಬಿಜೆಪಿಯಲ್ಲಿ ಯಾವುದೇ ನಾಯಕ ನನ್ನ ಬಗ್ಗೆ ಅಪಪ್ರಚಾರದ ಮಾತಾಡಿಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com