224 ಕ್ಷೇತ್ರದ ಜನರಿಂದ ಮಾಹಿತಿ ಸಂಗ್ರಹ: 'ಜನರಿಂದ ಜನರಿಗಾಗಿ' ಪ್ರಣಾಳಿಕೆ ಸಿದ್ಧಪಡಿಸಲು ಆಪ್ ಮುಂದು!

ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲು ಆಮ್ ಆದ್ಮಿ ಪಕ್ಷ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲು ಆಮ್ ಆದ್ಮಿ ಪಕ್ಷ ಮುಂದಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಮಾಹಿತಿ ಸಂಗ್ರಹಿಸಿ, ಜನರ ನೈಜ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ 'ಜನರಿಂದ ಜನರಿಗಾಗಿ' ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಜನರ ಅಭಿಪ್ರಾಯ ಸಂಗ್ರಹಿಸಿ, ಜನರ ಬೇಡಿಕೆಗಳ ಮಾಹಿತಿ ಆಧರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

“ಮಾರ್ಚ್‌ 4ರಂದು ದಾವಣಗೆರೆಯಲ್ಲಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಅರವಿಂದ್‌ ಕೇಜ್ರಿವಾಲ್‌ರವರು ಕರ್ನಾಟಕದ ಜನತೆಗೆ ಗ್ಯಾರೆಂಟಿಗಳ ಮೊದಲ ಪಟ್ಟಿಯನ್ನು ಘೋಷಿಸಿದರು. ಅದರಲ್ಲಿ ಶೂನ್ಯ ಭ್ರಷ್ಟಾಚಾರ, 300 ಯೂನಿಟ್‌ ಉಚಿತ ವಿದ್ಯುತ್‌, ಯುವಜನತೆಗೆ ಖಚಿತ ಉದ್ಯೋಗ ಹಾಗೂ ಉದ್ಯೋಗ ಸಿಗುವ ತನಕ ತಿಂಗಳಿಗೆ 3000 ರೂಪಾಯಿ ಉದ್ಯೋಗ ಭತ್ಯೆ, ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಗುಣಮಟ್ಟದ ಆರೋಗ್ಯ ಸೇವೆ, ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ಎಂಬ ಗ್ಯಾರೆಂಟಿಗಳನ್ನು ಘೋಷಿಸಿದ್ದಾರೆ. ಇದಕ್ಕೆ ಇನ್ನಷ್ಟು ಗ್ಯಾರೆಂಟಿಗಳನ್ನು ಸೇರಿಸಲು ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು.

ಮಾರ್ಚ್ 18 ಮತ್ತು 19ರಂದು ಪಕ್ಷದ ಕಾರ್ಯಾಧ್ಯಕ್ಷರು, ಉಪ ಕಾರ್ಯಾಧ್ಯಕ್ಷರು, ಸ್ಪರ್ಧಾಕಾಂಕ್ಷಿಗಳು ಮತ್ತು ಕಾರ್ಯಕರ್ತರು ತಮ್ಮ ಕ್ಷೇತ್ರಗಳಿಂದ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com