ರಾಜಕೀಯದಲ್ಲಿ ಯಡಿಯೂರಪ್ಪ ಅವರ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ

ಕಲ್ಯಾಣ ಕ್ರಾಂತಿಯ 9 ಶತಮಾನಗಳ ನಂತರ ಶಿವ ಶರಣರ ನಾಡು ಶಿಕಾರಿಪುರ ಹಾಗೂ ಬೀದರ್ ನ ಬಸವ ಕಲ್ಯಾಣವನ್ನು ಬೆಸೆದ ನಾಯಕನೊಬ್ಬ ಯಡಿಯೂರಪ್ಪ ಅವರ ರೂಪದಲ್ಲಿ ಹುಟ್ಟಿದ್ದಾನೆ' ಎಂದು ಬಣ್ಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಯಡಿಯೂರಪ್ಪ ಸರ್ವ ಸಮಾಜಕ್ಕೂ ನ್ಯಾಯ ಕೊಟ್ಟಿದ್ದಾರೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಶಿವಮೊಗ್ಗ: ಕಲ್ಯಾಣ ಕ್ರಾಂತಿಯ 9 ಶತಮಾನಗಳ ನಂತರ ಶಿವ ಶರಣರ ನಾಡು ಶಿಕಾರಿಪುರ ಹಾಗೂ ಬೀದರ್ ನ ಬಸವ ಕಲ್ಯಾಣವನ್ನು ಬೆಸೆದ ನಾಯಕನೊಬ್ಬ ಯಡಿಯೂರಪ್ಪ ಅವರ ರೂಪದಲ್ಲಿ ಹುಟ್ಟಿದ್ದಾನೆ' ಎಂದು ಬಣ್ಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಯಡಿಯೂರಪ್ಪ ಸರ್ವ ಸಮಾಜಕ್ಕೂ ನ್ಯಾಯ ಕೊಟ್ಟಿದ್ದಾರೆ ಎಂದು ಹೇಳಿದರು.

ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಶುಕ್ರವಾರ 12ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿಯ 65 ಅಡಿ ಎತ್ತರದ ಪುತ್ಥಳಿ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕೊಂಡಾಡಿದರು.

ಅನ್ಯಾಯದ ವಿರುದ್ಧ ಹೋರಾಡಿದ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಕನಸು ಕಂಡಿರಲಿಲ್ಲ. ದಣಿವರಿಯದೆ ದುಡಿದು ಶಿಕಾರಿಪುರದ ಜನರ ಪ್ರೀತಿ, ವಿಶ್ವಾಸ ಗಳಿಸಿದರು. ಅದಮ್ಯ ಆತ್ಮವಿಶ್ವಾಸ ಮತ್ತು ಧೈರ್ಯ ಅವರ ಮೂಲ ಮಂತ್ರಗಳು. ಬಸವಕಲ್ಯಾಣ ಅಭಿವೃದ್ಧಿಗೆ 600 ಕೋಟಿ ರೂ ನೀಡಿದ್ದರು. 12ನೇ ಶತಮಾನದ ಕ್ರಾಂತಿಯನ್ನು ಮುನ್ನಡೆಸಿದವರು ಯಡಿಯೂರಪ್ಪ ಎಂದು ಹೇಳಿದರು.

“ಶಿಕಾರಿಪುರ ದೇವರ ನಾಡು. ಶಿಕಾರಿಪುರಕ್ಕೆ ಯಡಿಯೂರಪ್ಪನವರ ಕೊಡುಗೆ ಅವಿಸ್ಮರಣೀಯವಾದದ್ದು. ಶಿಕ್ಷಣ, ಕೃಷಿ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಶಿಕಾರಿಪುರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲು ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು, ಯಡಿಯೂರಪ್ಪ ಅವರು ಕನಕದಾಸರ ಜನ್ಮಸ್ಥಳವಾದ ಕಾಗಿನೆಲೆಯನ್ನು 45 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ''ನನ್ನ ಕ್ಷೇತ್ರದಲ್ಲಿರುವ ಬಾಡಾ ಅಭಿವೃದ್ಧಿಗೆ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ವಾಲ್ಮೀಕಿ ಜಯಂತಿ ಆಚರಿಸಲು ಆದೇಶ ಹೊರಡಿಸಿದರು. ಯಡಿಯೂರಪ್ಪ ಅವರು ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದಾರೆಂದು ತಿಳಿಸಿದರು.

ಯಡಿಯೂರಪ್ಪ ಅವರು 35 ವರ್ಷಗಳ ಕಾಲ ಅಧಿಕಾರವಿಲ್ಲದೆ ಹೋರಾಡಿದ್ದರು. ಕರ್ನಾಟಕ ರಾಜಕೀಯದಲ್ಲಿ ನಾಯಕರನ್ನು ಸೃಷ್ಟಿಸಿದವರು ಎಂದರೆ, ಅದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಯಡಿಯೂರಪ್ಪ ಮಾತ್ರ. ರಾಜಕೀಯದಲ್ಲಿ ಯಡಿಯೂರಪ್ಪ ಅವರು ನಿವೃತ್ತರಾಗುವ ಪ್ರಶ್ನೆಯೇ ಇಲ್ಲ. ಜನರ ಮನಸ್ಸಿನಲ್ಲಿ ಅವರಿಗೆ ಶಾಶ್ವತ ಸ್ಥಾನವಿದೆ. ಯಡಿಯೂರಪ್ಪನವರ ಸೇವೆಗಳು ರಾಜ್ಯಕ್ಕೆ ವಿವಿಧ ರೂಪಗಳಲ್ಲಿ ಲಭ್ಯವಾಗಲಿವೆ ಎಂದು ಹೇಳಿದರು.

ವಿಜಯೇಂದ್ರ ಮೇಲೆ ನಿಮ್ಮ ಪ್ರೀತಿ ವಿಶ್ವಾಸ ತೋರಿಸಿ...
ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಲಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನತೆ ಆಶೀರ್ವದಿಸಬೇಕೆಂದು ಬೊಮ್ಮಾಯಿ ಮನವಿ ಮಾಡಿದರು.

ಶಿಕಾರಿಪುರದ ಜನರು ಯಡಿಯೂರಪ್ಪ ಅವರಿಗೆ ಪ್ರೀತಿ ಮತ್ತು ವಿಶ್ವಾಸವನ್ನು ನೀಡಿದರು ಮತ್ತು ಅವರ ಹಿರಿಯ ಮಗ ಮತ್ತು ಸಂಸದ ಬಿವೈ ರಾಘವೇಂದ್ರ ಅವರ ಮೇಲೆ ಅದೇ ರೀತಿಯ ಪ್ರೀತಿಯನ್ನು ತೋರಿಸಿದರು. ಇದೀಗ ಕಿರಿಯ ಪುತ್ರ ವಿಜಯೇಂದ್ರನಿಗೂ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭಧಲ್ಲಿ ಆನಂದಪುರದ ಮುರುಘರಾಜೇಂದ್ರ ಸ್ವಾಮೀಜಿ, ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಗೋವಿಂದ್ ಕಾರಜೋಳ, ಬಿ.ಎ.ಬಸವರಾಜ್, ಶಾಸಕ ಕುಮಾರ್ ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com