ಸೈಲೆಂಟ್ ಸುನೀಲ್ ಬೆನ್ನಲ್ಲೇ ಫೈಟರ್ ರವಿಗೂ ಬಿಜೆಪಿ ಶಾಕ್; ಶಿವರಾಮೇಗೌಡಗೆ ನಾಗಮಂಗಲ ಟಿಕೆಟ್?
ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್ ಗೆ ಶಾಕ್ ಕೊಟ್ಟಿದ್ದ ಬಿಜೆಪಿ ಇದೀಗ ಫೈಟರ್ ರವಿಗೂ ಆಘಾತ ನೀಡಿದ್ದು, ನಾಗಮಂಗಲ ಕ್ಷೇತ್ರದ ಟಿಕೆಟ್ ಅನ್ನು ಎಲ್. ಆರ್. ಶಿವರಾಮೇಗೌಡಗೆ ನೀಡುವ ಕುರಿತು ನಿರ್ಧರಿಸಿದೆ ಎನ್ನಲಾಗಿದೆ.
Published: 20th March 2023 12:03 AM | Last Updated: 04th April 2023 02:12 PM | A+A A-

ಬಿಜೆಪಿ ಕಾರ್ಯಕ್ರಮದಲ್ಲಿ ಶಿವರಾಮೇಗೌಡ
ಮಂಡ್ಯ: ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್ ಗೆ ಶಾಕ್ ಕೊಟ್ಟಿದ್ದ ಬಿಜೆಪಿ ಇದೀಗ ಫೈಟರ್ ರವಿಗೂ ಆಘಾತ ನೀಡಿದ್ದು, ನಾಗಮಂಗಲ ಕ್ಷೇತ್ರದ ಟಿಕೆಟ್ ಅನ್ನು ಎಲ್. ಆರ್. ಶಿವರಾಮೇಗೌಡಗೆ ನೀಡುವ ಕುರಿತು ನಿರ್ಧರಿಸಿದೆ ಎನ್ನಲಾಗಿದೆ.
ಹೌದು.. ನಾಗಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿಗೂ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಸಿದ ಬಳಿಕ ಮಾಜಿ ಸಂಸದ L.R ಶಿವರಾಮೇಗೌಡರು ಬಿಜೆಪಿ ಪಕ್ಷ ಸೇರೋದು ಪಕ್ಕಾ ಆಗಿದೆ. ಇಂದು ಬೆಂಗಳೂರಿನಲ್ಲಿ ನಾಗಮಂಗಲ ನಿವಾಸಿಗಳ ಸಮಾವೇಶ ನಡೆದಿದ್ದು, ಈ ಸಭೆಯಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ಶಿವರಾಮೇಗೌಡರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ನಾಯಂಡಹಳ್ಳಿಯ ನಂದಿಲಿಂಕ್ ಗ್ರೌಂಡ್ಸ್ನಲ್ಲಿ ನಡೆದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ಬೃಹತ್ ಸ್ವಾಭಿಮಾನಿ ಸಮಾವೇಶದಲ್ಲಿ ನೆರೆದಿದ್ದ ಎಲ್ಲಾ ನನ್ನ ಜನರ ಸಮ್ಮತಿ ಪಡೆದು ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ಬಿಜೆಪಿ ಪಕ್ಷ ಸೇರಲು ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದೇನೆ. #LRS pic.twitter.com/X2YwqWuw2Z
— LR Shivarame Gowda (@LRSMandyaExMP) March 19, 2023
ಬೆಂಗಳೂರಿನಲ್ಲಿ ನಡೆದ ನಾಗಮಂಗಲ ನಿವಾಸಿಗಳ ಸಮಾವೇಶದಲ್ಲಿ ಸಚಿವ ಮುನಿರತ್ನ ಭಾಗಿಯಾಗಿದ್ದರು. ಸಚಿವ ಮುನಿರತ್ನ ಇದ್ದ ವೇದಿಕೆಯಲ್ಲೇ ಎಲ್.ಆರ್. ಶಿವರಾಮೇಗೌಡ, ಇನ್ನು ಮೂರರಿಂದ ನಾಲ್ಕು ದಿನದಲ್ಲಿ ಬಿಜೆಪಿ ಸೇರುತ್ತೇನೆ. ನಾಗಮಂಗಲದಲ್ಲಿ ಬೃಹತ್ ಸಮಾವೇಶ ಮಾಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಮಂಡ್ಯದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ನಾನು ಶ್ರಮಿಸುತ್ತೇನೆ ಎಂದು ಘೋಷಣೆ ಮಾಡಿದರು.
ಇದನ್ನೂ ಓದಿ: ಫೈಟರ್ ರವಿಯೊಂದಿಗೆ ಪ್ರಧಾನಿ ಮೋದಿ: 'ಭದ್ರತಾ ಲೋಪ.. ಮೋದಿಗೆ ಆತ ಯಾರೆಂದು ತಿಳಿದಿಲ್ಲ'; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮೂಲಗಳ ಪ್ರಕಾರ L.R ಶಿವರಾಮೇಗೌಡರು ಈಗಾಗಲೇ ಬಿಜೆಪಿ ನಾಯಕರೊಂದಿಗೆ ಪಕ್ಷ ಸೇರ್ಪಡೆ ಕುರಿತು ಮಾತುಕತೆ ಮಾಡಿ ಮುಗಿಸಿದ್ದಾರೆ. ನಾಗಮಂಗಲದಲ್ಲಿ ಫೈಟರ್ ರವಿ ಬದಲಿಗೆ ಶಿವರಾಮೇಗೌಡರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ಫೈಟರ್ ರವಿ ಬಿಜೆಪಿ ಪಕ್ಷವನ್ನ ಸೇರಿದ್ದರು. ಫೈಟರ್ ರವಿ ಕಮಲ ಹಿಡಿಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಿದ ವೇಳೆ ಫೈಟರ್ ರವಿ ನಮಸ್ಕರಿಸಿದ್ದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಈ ಎಲ್ಲಾ ಬೆಳವಣಿಗೆಗಳು ಬಿಜೆಪಿ ನಾಯಕರಿಗೆ ಇರಿಸು ಮುರಿಸು ತಂದಿತ್ತು. ವಿರೋಧಿಗಳ ಬಾಯಿ ಮುಚ್ಚಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಇದನ್ನೂ ಓದಿ: ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ ಫೋಟೊ: ವರದಿ ಕೇಳಿದ ಬಿಜೆಪಿ ಹೈಕಮಾಂಡ್
ನಾಗಮಂಗಲದಲ್ಲಿ ಫೈಟರ್ ರವಿ ಬದಲು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರನ್ನ ಕರೆತಂದು ಬಿಜೆಪಿ ಟಿಕೆಟ್ ಕೊಡಲು ತಯಾರಿ ನಡೆಸಿದೆ. ಶಿವರಾಮೇಗೌಡರು ಬಿಜೆಪಿ ಸೇರ್ಪಡೆಯೊಂದಿಗೆ ಫೈಟರ್ ರವಿಗೆ ನಾಗಮಂಗಲ ಬಿಜೆಪಿ ಟಿಕೆಟ್ ಇಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಿದೆ.