ಚನ್ನಪಟ್ಟಣದಲ್ಲಿ ನಟಿ ರಮ್ಯಾ ಸ್ಪರ್ಧೆ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ: ಹೆಚ್‌ಡಿ ಕುಮಾರಸ್ವಾಮಿ

ಚಿತ್ರ ನಟಿ ರಮ್ಯಾ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ಚಿತ್ರ ನಟಿ ರಮ್ಯಾ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಮೈಸೂರಿನಲ್ಲಿ ಆಯೋಜನೆಯಾಗಲಿರುವ ಪಂಚರತ್ನ ರಥ ಯಾತ್ರೆ ಸಮಾರೋಪದ ಕುರಿತು ಮಾಹಿತಿ ನೀಡಿದರು.

ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಸಮಾರೋಪ ಆಯೋಜಿಸಲು ಮೂರು ತಿಂಗಳ ಹಿಂದೆಯೇ ನಿಶ್ಚಯಿಸಲಾಗಿತ್ತು. 100 ಎಕರೆ ವಿಸ್ತಾರದ ಮೈದಾನದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಸೇರಲಿದ್ದಾರೆ ಎಂದು ಹೇಳಿದರು.

ಏಪ್ರಿಲ್ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಸಮಾರೋಪದ ಮೂಲಕವೇ ಜೆಡಿಎಸ್ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇವೆ. ‘ಪಂಚರತ್ನ’ ಕಾರ್ಯಕ್ರಮಗಳು ಎಚ್.ಡಿ.ದೇವೇಗೌಡರ ಕನಸು‌. 6 ದಶಕದ ಸುದೀರ್ಘ ರಾಜಕಾರಣದಲ್ಲಿ ಅವರಿಗೆ ಅಧಿಕಾರ ಸಿಕ್ಕಿದ್ದು ಎರಡೂವರೆ ವರ್ಷಗಳು ಮಾತ್ರ. ಪಂಚರತ್ನ ಕಾರ್ಯಕ್ರಮಗಳ ಜಾರಿಗೆ ರೂ. 2.5 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಬಂಡವಾಳ ವೆಚ್ಚವಾಗಿ ಕಾರ್ಯಕ್ರಮಗಳಿಗೆ ಸದ್ವಿನಿಯೋಗ ಮಾಡಲಾಗುವುದು. ಅದರಿಂದ ನಾಡಿನ ಎಲ್ಲ ಸಮುದಾಯಗಳ ಅಭಿವೃದ್ಧಿ ಆಗಲಿದೆ. ಸುವರ್ಣ ರಾಮರಾಜ್ಯ ಸ್ಥಾಪನೆಯಾಗಲಿದೆ. ಅಮೃತ ಕಾಲಕ್ಕೆ 2047 ಆಗಬೇಕಿಲ್ಲ. 5 ವರ್ಷ ಸಾಕು’ ಎಂದು ತಿಳಿಸಿದರು.

2009-10ರಲ್ಲಿಯೇ ಎಲ್ಲಾ ಬಡವರಿಗೆ ಮನೆ ನೀಡಲಾಗಿದೆಯೆಂದು ಯುಪಿಎ ಸರ್ಕಾರ ಹೇಳಿತ್ತು. ಆದರೆ, ಅದು ಕಾಗದದಲ್ಲಷ್ಟೇ ಇದೆ. ಬಹಿರ್ದೆಸೆ ಮುಕ್ತ ರಾಜ್ಯವೆಂದು ಘೋಷಣೆಯಾಗಿದ್ದರೂ ಉತ್ತರ ಕರ್ನಾಟಕ‌ ಜಿಲ್ಲೆಗಳಲ್ಲಿ ಶೌಚಾಲಯಗಳಿಲ್ಲ. ಮಹಿಳೆಯರು, ಹೆಣ್ಣು ಮಕ್ಕಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸುಸಜ್ಜಿತ ಆಸ್ಪತ್ರೆ, ಶಾಲೆ, ಬಡವರಿಗೆ ನಿವೇಶನ, ಮನೆ, ಯುವಕರಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಪಂಚರತ್ನ ಕಾರ್ಯಕ್ರಮಗಳಲ್ಲಿದೆ’ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ನದು ಡುಪ್ಲಿಕೇಟ್‌ ಕಾರ್ಡ್‌
ಕಾಂಗ್ರೆಸ್‌ ಈಗ ಕೊಡುತ್ತಿರುವುದು ಗ್ಯಾರಂಟಿ ಕಾರ್ಡ್‌ ಅಲ್ಲ, ಅದು ಡುಪ್ಲಿಕೇಟ್‌ ಕಾರ್ಡ್‌. ಗೃಹ ಲಕ್ಷ್ಮಿ ಯೋಜನೆಗೆ 25 ಸಾವಿರ ಕೋಟಿ ರೂ. ಬೇಕು. ಇದನ್ನೆಲ್ಲ ಪೂರೈಸುವುದು ಸಾಧ್ಯವೆ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸಗಡ, ರಾಜಸ್ಥಾನದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತಲ್ಲವೇ? ಬಿಜೆಪಿಯ ಯೋಜನೆಗಳೂ ಕೂಡ ಜಾಹೀರಾತುಗಳಲ್ಲಿ ಕಾಣುತ್ತವೆ. ಅವು ಜನರಿಗೆ ತಲುಪಿವೆಯೇ’ ಎಂದು ಪ್ರಶ್ನಿಸಿದರು.

‘ವಿಜಯಸಂಕಲ್ಪ ಯಾತ್ರೆಯಲ್ಲಿ ಅಧಿಕಾರಿಗಳಿಂದ ಜನರನ್ನು ಕರೆಸುತ್ತಿದ್ದಾರೆ. ನಿಜವಾದ ಫಲಾನುಭವಿಗಳನ್ನು ಕರೆತರುತ್ತಿಲ್ಲ. ಹಣ ಕೊಟ್ಟು ಜನ ಸೇರಿಸುತ್ತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಅವರು ಬಸವರಾಜ ಬೊಮ್ಮಾಯಿ ಅಂತಹ ಮುಖ್ಯಮಂತ್ರಿ ನೋಡಿಲ್ಲ ಎಂದು ಹೇಳಿದ್ದಾರೆ. ಇದು ವ್ಯಂಗ್ಯವೋ? ಇನ್ನಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ’ ಎಂದು ಟೀಕಿಸಿದರು.

ಸಿದ್ದರಾಮಯ್ಯ ಕುರಿತು ಅನುಕಂಪ...
ಸಿದ್ದರಾಮಯ್ಯ ʻʻಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದವರು, ಉಪ ಮುಖ್ಯಮಂತ್ರಿಯಾಗಿದ್ದವರು, 13 ಬಜೆಟ್ ಮಂಡಿಸಿದವರು. ಅಂತಹವರಿಗೆ ಒಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಳ್ಳಲು ಆಗುತ್ತಿಲ್ಲ. ಇದನ್ನು ನೋಡಿ ವ್ಯಂಗ್ಯ ಮಾಡುತ್ತಿಲ್ಲ, ಅನುಕಂಪ ಬರುತ್ತಿದೆʼʼ ಎಂದು ಹೇಳಿದರು.

ಕೋಲಾರ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿ 6 ಸ್ಥಾನದಲ್ಲಿ 5 ಸ್ಥಾನದಲ್ಲಿ ನಾವು ಮುಂದೆ ಇದ್ದೇವೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಈಗ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೆಸರು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿರಬಹುದು. ಆದರೆ, ಅವರ ಪರಿಸ್ಥಿತಿ ನೋಡಿ ನನಗೆ ಬೇಸರವಾಗುತ್ತಿದೆ. ಅನುಭವಿ ರಾಜಕಾರಣಿಯಾಗಿರುವ ಅವರು ಆತಂಕವನ್ನು ತಾವೇ ಸೃಷ್ಟಿ ಮಾಡಿಕೊಂಡಿದ್ದಾರೆʼʼ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ರಮ್ಯಾ ಸ್ಪರ್ಧಿಸದರೂ ತಲೆ ಕೆಡಿಸಿಕೊಳ್ಳಲ್ಲ...
ನನ್ನ ಸಹೋದರಿ ಚಿತ್ರ ನಟಿ ರಮ್ಯಾ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ,  ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಚಿತ್ರ ನಟ, ನಟಿಯರಿಗೆ ಕ್ಷೇತ್ರದ ಹಂಗಿಲ್ಲ, ಅವರಿಗೆ ಸಹಜವಾಗಿ ಜನಪ್ರಿಯತೆ ಇರುತ್ತದೆ ಎಂದು ಹೇಳಿದರು.

ಯಾರ‍್ಯಾರೋ ಏನೇನೋ ವದಂತಿ ಹಬ್ಬಿಸುತ್ತಿದ್ದಾರೆ. ಸಂಸದೆ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿದರೆ ನಾನು ಅರ್ಜಿ ಹಾಕುತ್ತೇನೆ ಅಂತಲೂ ಹೇಳುತ್ತಿದ್ದಾರೆ. ಅದೆಲ್ಲ ಸುಳ್ಳು. ನಾನು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತೇನೆ. ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೂ ಇಲ್ಲ. ಅದೆಲ್ಲ ಊಹಾಪೋಹ ಅಷ್ಟೆʼʼ ಎಂದು ಸ್ಪಷ್ಟಪಡಿಸಿದರು.

ಕನಕಪುರದಲ್ಲೂ ಗೆಲುವು ಖಚಿತ...
ನಾನು ಚನ್ನಪಟ್ಟಣದಲ್ಲಿ ಈಗಾಗಲೇ ಚುನಾವಣೆ ಮುಗಿಸಿದ್ದೇನೆ. ನನಗೆ ಚನ್ನಪಟ್ಟಣ ಟಫ್ ಎನ್ನುವುದು ಸುಳ್ಳು. ಕನಕಪುರದಲ್ಲಿ ಈ ಬಾರಿ ಸಾಮಾನ್ಯ ಕಾರ್ಯಕರ್ತನನ್ನೇ ಕಣಕ್ಕೆ ಇಳಿಸುತ್ತೇವೆ‌. ಈ ಬಾರಿಯ ಪೈಪೋಟಿಯ ಬೆಳೆ 2028ಕ್ಕೆ ಬರಲಿದೆ. ಕನಕಪುರದಲ್ಲಿ 2028ರಲ್ಲಿ ಗೆದ್ದೇ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡ ರೋಡ್ ಶೋ...
ಸಮಾರೋಪದ ದಿನದಂದೇ ಹೆಚ್.ಡಿ.ದೇವೇಗೌಡ ಅವರು ಮೈಸೂರಿನ ಶ್ರೀರಾಂಪುರದಿಂದ ಸಮಾವೇಶದ ಸ್ಥಳದವರೆಗೆ 3 ಕಿ.ಮೀ ರೋಡ್ ಶೋ ನಡೆಸಲಿದ್ದಾರೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್, ಮುಖಂಡರಾದ ಕೆ.ವಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ನಗರ ಘಟಕದ ಅಧ್ಯಕ್ಷ ಚಲುವೇಗೌಡ, ಮುಖಂಡರಾದ ಪ್ರೇಮಾ ಶಂಕರೇಗೌಡ, ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಎಸ್ ಬಿಎಂ ಮಂಜು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com