ಬಿಎಸ್ ವೈ ಇಲ್ಲದ ಬಿಜೆಪಿಗೆ ಉಳಿಗಾಲವಿಲ್ಲ: ಲಿಂಗಾಯತ ನಾಯಕನ ಮನ ಸಂತೋಷ ಪಡಿಸಲು 'ಶಾ' ತಂತ್ರ; ತಂದೆ ಮುಂದೆ ಮಗನ ಬೆನ್ನುತಟ್ಟಿದ ಚಾಣಕ್ಯ!
ರಾಜ್ಯ ಪ್ರವಾಸಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಹ್ವಾನದಂತೆ ಶುಕ್ರವಾರ ಬೆಳಗ್ಗೆ ಅವರ ನಿವಾಸಕ್ಕೆ ಉಪಹಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಬಿಎಸ್‌ವೈ ಬದಲಾಗಿ ವಿಜಯೇಂದ್ರ ಅವರ ಕೈಯಲ್ಲೇ ಹೂಗುಚ್ಛ ಪಡೆದುಕೊಂಡ ಪ್ರಸಂಗ ನಡೆಯಿತು.
Published: 25th March 2023 10:01 AM | Last Updated: 25th March 2023 03:04 PM | A+A A-

ವಿಜಯೇಂದ್ರ ಮತ್ತು ಅಮಿತ್ ಶಾ
ಬೆಂಗಳೂರು: ರಾಜ್ಯ ಪ್ರವಾಸಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಹ್ವಾನದಂತೆ ಶುಕ್ರವಾರ ಬೆಳಗ್ಗೆ ಅವರ ನಿವಾಸಕ್ಕೆ ಉಪಹಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಬಿಎಸ್‌ವೈ ಬದಲಾಗಿ ವಿಜಯೇಂದ್ರ ಅವರ ಕೈಯಲ್ಲೇ ಹೂಗುಚ್ಛ ಪಡೆದುಕೊಂಡ ಪ್ರಸಂಗ ನಡೆಯಿತು.
ಬಿಎಸ್‌ವೈ ಸರ್ಕಾರಿ ನಿವಾಸ ಕಾವೇರಿಗೆ ಅಮಿತ್ ಶಾ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಸ್ವಾಗತಿಸಲು ಮುಂದಾದರು. ಈ ವೇಳೆ ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಲು ಯಡಿಯೂರಪ್ಪ ಅವರು ಮುಂದಾದಾಗ, ವಿಜಯೇಂದ್ರ ಕೈಯಿಂದಲೇ ಹೂಗುಚ್ಛವನ್ನು ಮೊದಲು ಕೊಡಿಸಿ ಎಂದರು.
ಈ ವೇಳೆ ಯಡಿಯೂರಪ್ಪ ಕೆಲ ಕ್ಷಣ ತಬ್ಬಿಬ್ಬಾದರು. ನಂತರದಲ್ಲಿ ತಮ್ಮ ಕೈಯಲ್ಲಿದ್ದ ಹೂಗುಚ್ಛವನ್ನು ಪುತ್ರ ವಿಜಯೇಂದ್ರ ಕೈಗೆ ಕೊಟ್ಟರು. ನಂತರದಲ್ಲಿ ವಿಜಯೇಂದ್ರ ಕೈಯಲ್ಲಿ ಹೂಗುಚ್ಚವನ್ನು ಪಡೆದುಕೊಂಡ ಅಮಿತ್ ಶಾ ವಿಜಯೇಂದ್ರ ಅವರ ಬೆನ್ನು ತಟ್ಟಿದರು.
ಇದನ್ನೂ ಓದಿ: ಉಪಾಹಾರ ಕೂಟದಲ್ಲಿ ಅಮಿತ್ ಶಾಗೆ ಸ್ವತಃ ತಿಂಡಿ ಬಡಿಸಿದ ಬಿ ವೈ ವಿಜಯೇಂದ್ರ ಹೇಳಿದ್ದೇನು?
ಲಿಂಗಾಯತ ಪ್ರಮುಖ ನಾಯಕ ಯಡಿಯೂರಪ್ಪ ಅವರನ್ನು ಸಂತೋಷವಾಗಿಡಲು ಪಕ್ಷ ಬಯಸಿದೆ, ಬಿಎಸ್ ವೈ ಅವರನ್ನು ಕಡೆಗಣಿಸಿದರೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಸಂಚಕಾರ ಬಹಬಹುದು ಎಂಬುದನ್ನು ಅರಿತಿರುವ ಹೈಕಮಾಂಡ್ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಪ್ರಬಲ ಸಂದೇಶ ರವಾನಿಸಿದೆ.
ಸದ್ಯ ಅಮಿತ್ ಶಾ ಅವರು ಬಿವೈ ವಿಜಯೇಂದ್ರ ಜೊತೆ ಆತ್ಮೀಯವಾಗಿ ನಡೆದುಕೊಂಡಿರುವ ರೀತಿ ಬಿಎಸ್‌ವೈ ಪುತ್ರನಿಗೆ ಹೊಸ ಆತ್ಮವಿಶ್ವಾಸ ತುಂಬಿದ್ರೆ, ಅತ್ತ ಬಿಜೆಪಿಯ ಒಳಗಿರುವ ವಿಜಯೇಂದ್ರ ವಿರೋಧಿಗಳಿಗೆ ನಡುಕ ಶುರುವಾಗಿದೆ. ಬಿಎಸ್‌ವೈ ನಂತರ ಅವರ ಪುತ್ರ ವಿಜಯೇಂದ್ರ ಮುನ್ನೆಲೆಗೆ ಬರುತ್ತಾರೆ ಎಂಬುದನ್ನು ಅರಿತಿರುವ ವಿರೋಧಿಗಳು ಈಗಾಗಲೇ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ.
ಯಡಿಯೂರಪ್ಪ ಅವರನ್ನುಕಡೆಗಣಿಸಿದರೇ ಪಕ್ಷದ ಚುನಾವಣಾ ಭವಿಷ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ಪಕ್ಷದ ಅರಿತುಕೊಂಡಿದೆ. ಅದರ ಫಲವೇ ಇದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮತ್ತೆ ಅಧಿಕಾರಕ್ಕೇರುವ ಹಠ ತೊಟ್ಟ ಬಿಜೆಪಿ; ರಾಜ್ಯಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಸತತ ಭೇಟಿ
ಲಿಂಗಾಯತ ನಾಯಕರಾದ ಮೋಹನ್ ಲಿಂಬಿಕಾಯಿ, ವಿಎಸ್ ಪಾಟೀಲ್ ಮತ್ತು ಕಿರಣ್ ಕುಮಾರ್ ಅವರಂತಹ ಲಿಂಗಾಯತ ನಾಯಕರು ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಜೆ.ಪಿ ನಡ್ಡಾ, ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ಬಾರಿ ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್ ಶಾ, ರಾಜ್ಯದ ಜನರ ನಾಡಿ ಮಿಡಿತ ಅರಿತಿದ್ದಾರೆ. ಯಡಿಯೂರಪ್ಪ ಇಲ್ಲದೇ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದನ್ನು ಮನಗಂಡಿರುವ ಶಾ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ವಿಜಯೇಂದ್ರಗೆ ಪ್ರಾಮುಖ್ಯತೆ ನೀಡುವ ಮೂಲಕ ಯಡಿಯೂರಪ್ಪ ಅವರನ್ನು ಓಲೈಸುವ ತಂತ್ರ ರೂಪಿಸಿದ್ದಾರೆ.