ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿಲ್ಲ, ಹುದ್ದೆಗಳಿಗಾಗಿ ಲಾಬಿ ಮಾಡಿಲ್ಲ: ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನಿಲ್ಲ ಎಂದು ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ಹೇಳಿದ್ದಾರೆ. 
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ಹುಬ್ಬಳ್ಳಿ: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನಿಲ್ಲ ಎಂದು ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ಹೇಳಿದ್ದಾರೆ. 

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ನಾನು ಯಾವತ್ತೂ ಯಾವುದೇ ಹುದ್ದೆಯ ಹಿಂದೆ ಬಿದ್ದಿಲ್ಲ ಮತ್ತು ಯಾವುದೇ ಹುದ್ದೆಗಾಗಿ ಲಾಬಿ ಮಾಡಿಲ್ಲ. ನನ್ನ ಏಕೈಕ ಕಾಳಜಿ ನನ್ನ ಸಮುದಾಯಕ್ಕೆ (ಲಿಂಗಾಯತ) ಮೀಸಲಾತಿ ಮತ್ತು ನನ್ನ ಕ್ಷೇತ್ರದ ಅಭಿವೃದ್ಧಿ ಮಾತ್ರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡನ್ನೂ ಈಡೇರಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು ಮತ್ತು ಹಿಂದುತ್ವ ಸಿದ್ಧಾಂತವನ್ನು ರಕ್ಷಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಲಿಂಗಾಯತರನ್ನು ಮುಂದಿನ ಸಿಎಂ ಮಾಡಲು ಪಕ್ಷದೊಳಗಿನ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಅವರು, 'ಲಿಂಗಾಯತರು ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿದ್ದು, ಅವರ ಮತಗಳನ್ನು ಕಳೆದುಕೊಳ್ಳಲು ಪಕ್ಷ ಸಿದ್ಧವಿಲ್ಲ. ಆದರೆ, ಇತರ ಪಕ್ಷಗಳು ತಪ್ಪು ಮಾಹಿತಿ ಪ್ರಚಾರದಲ್ಲಿ ತೊಡಗಿವೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರೂ ಅನಗತ್ಯವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದರು.

ಜೆಡಿಎಸ್ ಮುಖಂಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ನಾನು ಈ ಹಿಂದೆ ಜೆಡಿಎಸ್ ಜೊತೆ ಇದ್ದಾಗ, ಅವರ ಪಕ್ಷವು ಲಿಂಗಾಯತರನ್ನು ಎಷ್ಟು ಗೌರವಿಸುತ್ತದೆ ಎಂಬುದು ನನಗೆ ತಿಳಿದಿದೆ. ಮಾಜಿ ಸಿಎಂಗಳಾದ ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ ಹಾಗೂ ಬಸವರಾಜ ಹೊರಟ್ಟಿ ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ನಮಗೆ ಗೊತ್ತಿದೆ ಎಂದರು.

ಈಗ ಬಿಜೆಪಿಗೆ ಜೋಶಿ ಅಥವಾ ಬಿಎಲ್ ಸಂತೋಷ್ ಅವರನ್ನು ಸಿಎಂ ಮಾಡುವಂತೆ ಕುಮಾರಸ್ವಾಮಿ ಹೇಳುತ್ತಿದ್ದಾರೆ. 'ಈ ಹಿಂದೆ ದಲಿತರನ್ನು ಸಿಎಂ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ನಂತರ ಮುಸ್ಲಿಂ ಎಂದರು. ಆದರೆ, ಈಗ ತಾನೇ ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಲಿಂಗಾಯತರು, ಕುರುಬರು ಮತ್ತು ದಲಿತರನ್ನು ಜೆಡಿಎಸ್ ಗೌರವಿಸುವುದಿಲ್ಲ... ಈ ಚುನಾವಣೆಯ ನಂತರ ಕುಮಾರಸ್ವಾಮಿ ರಾಜಕೀಯವಾಗಿ ಅಪ್ರಸ್ತುತರಾಗುತ್ತಾರೆ ಎಂದು ಹೇಳಿದರು.

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಶೆಟ್ಟರ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಅವರ (ಶೆಟ್ಟರ್‌) ಆತ್ಮೀಯ ಗೆಳೆಯನಾಗಿದ್ದ ನಾನು ಬಿಎಸ್‌ ಯಡಿಯೂರಪ್ಪ ಅವರೊಂದಿಗೆ ಹೋರಾಡಿದೆ. ಪಕ್ಷ ನೀಡಿದ ಸ್ಥಾನಗಳನ್ನು ಅನುಭವಿಸುತ್ತಿದ್ದರೂ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದು ಶೆಟ್ಟರ್ ಮಾಡಿದ ಪ್ರಮಾದ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com