ಕರ್ನಾಟಕ ಚುನಾವಣೆ: ಕ್ರಿಮಿನಲ್ ಪ್ರಕರಣಗಳು ಮಾನದಂಡವಲ್ಲ, ಗೆಲ್ಲುವ ಸಾಮರ್ಥ್ಯವೇ ಪ್ರಮುಖ ಅಂಶ!

ಕರ್ನಾಟಕ ವಿಧಾನಸಭಾ ಚುನಾವಣಾ ಕಣದಲ್ಲಿರುವ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳಲ್ಲಿ ಹೆಚ್ಚಿನ ಮಂದಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ  ಅವರಿಗೆ ಪಕ್ಷಗಳು ಆದ್ಯತೆ ನೀಡಿವೆ ಎಂಬುದು ಇತ್ತೀಚಿನ ಅಧ್ಯಯನವೊಂದರ ವರದಿಯಲ್ಲಿ ಹೇಳಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಕಣದಲ್ಲಿರುವ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳಲ್ಲಿ ಹೆಚ್ಚಿನ ಮಂದಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಅವರಿಗೆ ಪಕ್ಷಗಳು ಆದ್ಯತೆ ನೀಡಿವೆ ಎಂಬುದು ಇತ್ತೀಚಿನ ಅಧ್ಯಯನವೊಂದರ ವರದಿಯಲ್ಲಿ ಹೇಳಲಾಗಿದೆ. 

ಶೇ. 21 ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳ  ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿಯಲ್ಲಿ ಹೇಳಲಾಗಿದೆ. 2004ರಿಂದ 2022ರವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ವಿವರಗಳನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಬುಧವಾರ ಬಿಡುಗಡೆಯಾದ ಈ ವರದಿಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಯನ್ನು ಮತ್ತಷ್ಟು ವಿಶ್ಲೇಷಿಸಲಾಗಿದೆ. 

ಇತ್ತೀಚಿನ ವರದಿಯ ಪ್ರಕಾರ ಒಟ್ಟು 581 ಅಭ್ಯರ್ಥಿಗಳು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ. ಈ ಪೈಕಿ 96 ಬಿಜೆಪಿ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದು, ಕಾಂಗ್ರೆಸ್‌ನ 122, ಜೆಡಿಎಸ್‌ನ 70, ಆಪ್‌ನ 40 ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿಯು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. 

ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಗೆಲ್ಲುವ ಸಾಮರ್ಥ್ಯ ಪ್ರಮುಖವಾಗಿದೆ. ಸಾಮಾನ್ಯವಾಗಿ, ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ತೋಳ್ಬಲ, ಆರ್ಥಿಕ ಬೆಂಬಲವನ್ನು ಹೊಂದಿರುತ್ತಾರೆ, ಇದು ಅವರನ್ನು ನಿರೀಕ್ಷಿತ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲು ಪ್ರಮುಖ ಕಾರಣವಾಗಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಾಲಿಸಿ ಅಂಡ್ ಗವರ್ನೆನ್ಸ್‌ನ  ನಾರಾಯಣ ಎ ಹೇಳುತ್ತಾರೆ. 

ಕ್ರಿಮಿನಲ್ ಪ್ರಕರಣಗಳು, ದೂರುಗಳಿರುವ ಅಭ್ಯರ್ಥಿಗಳ ಮೇಲೆ ವಿಶೇಷ ಗಮನಹರಿಸಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (B-PAC) ಬುಧವಾರ “ನಿಮ್ಮ ಅಭ್ಯರ್ಥಿ ಬಗ್ಗೆ ತಿಳಿದುಕೊಳ್ಳಿ” ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 115 ಅಭ್ಯರ್ಥಿಗಳ ವಿರುದ್ಧ ಭ್ರಷ್ಟಾಚಾರ, ವಂಚನೆ, ಚುನಾವಣಾ ಅಪರಾಧಗಳು, ಗಲಭೆಗಳು, ಕಾನೂನುಬಾಹಿರ ಸಭೆ ಮತ್ತು ಪ್ರಕರಣಗಳು ದಾಖಲಾಗಿವೆ. 

ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಮತದಾರರು ಕೂಡ ತಪ್ಪು ಮಾಡುತ್ತಾರೆ ಎಂದು ಎಡಿಆರ್ ಸಂಸ್ಥಾಪಕ ಸದಸ್ಯ ಐಐಎಂ-ಬೆಂಗಳೂರಿನ ಪ್ರೊಫೆಸರ್ ತ್ರಿಲೋಚನ್ ಶಾಸ್ತ್ರಿ ಹೇಳಿದ್ದಾರೆ. "ಸಾಮಾನ್ಯವಾಗಿ, ಅನೇಕರು ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕಡಿಮೆ ಮಾಹಿತಿ ಹೊಂದಿರುತ್ತಾರೆ ಮತ್ತು ಅವರ ರಾಜಕೀಯ ಮತ್ತು ಅಪರಾಧ ಹಿನ್ನೆಲೆಗಳನ್ನು ಸಂಶೋಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರಾಜಕೀಯ ಪಕ್ಷಗಳು ತಮ್ಮ ಎಲ್ಲಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪೋಸ್ಟ್ ಮಾಡಲು ಮತ್ತು ಅವರ ಆಯ್ಕೆಗೆ ಕಾರಣಗಳನ್ನು ವಿವರಿಸುವ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು (EC) ನಿರ್ದೇಶಿಸಿದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ವಿವರಗಳನ್ನು ಬಹಿರಂಗಗೊಳಿಸಲಾಗುತ್ತದೆ. ಆದರೆ ಎಲ್ಲಾ ರಾಜಕೀಯ ಪಕ್ಷಗಳು ಅದನ್ನು ಪಾಲಿಸುವುದಿಲ್ಲ ಎಂದು ಶಾಸ್ತ್ರಿ ಹೇಳಿದರು.

2004 ರಿಂದ ವಿಶ್ಲೇಷಿಸಲಾದ ಒಟ್ಟು 8,893 ಅಭ್ಯರ್ಥಿಗಳಲ್ಲಿ 1,135 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ ಎಂದು ಎಡಿಆರ್ ವರದಿ ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕ್ಲೀನ್ ರೆಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲು ಕೇವಲ ಶೇ. 7 ರಷ್ಟು ಅವಕಾಶ ಹೊಂದಿದ್ದಾರೆ. 

2023ರ ಚುನಾವಣೆಗೆಗಾಗಿ ಅಭ್ಯರ್ಥಿಗಳ ವಿಶ್ಲೇಷಣೆ

ಅಪರಾಧ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳು - 581
ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳು - 406
ಕೋಟ್ಯಾಧಿಪತಿ ಅಭ್ಯರ್ಥಿಗಳು - 1,087
ಅಭ್ಯರ್ಥಿಗಳ ಸರಾಸರಿ ಆಸ್ತಿ - 12.26 ಕೋಟಿ ರೂ

ಅತ್ಯಧಿಕ ಘೋಷಿತ ಆಸ್ತಿ ಹೊಂದಿರುವ ಟಾಪ್ 3 ಅಭ್ಯರ್ಥಿಗಳು

ಯೂಸುಫ್ ಷರೀಫ್ - 1,633 ಕೋಟಿ ರೂ
ಎನ್ ನಾಗರಾಜು - 1,609 ಕೋಟಿ ರೂ
ಡಿ ಕೆ ಶಿವಕುಮಾರ್ - 1,413 ಕೋಟಿ ರೂ

ಎಲ್ಲಾ ರಾಜಕೀಯ ಪಕ್ಷಗಳಲ್ಲಿರುವ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 

ರಾಷ್ಟ್ರೀಯ ಪಕ್ಷ - 269
ರಾಜ್ಯ ಪಕ್ಷ - 83
ನೋಂದಾಯಿತ ಗುರುತಿಸದ ಪಕ್ಷ - 110
ಸ್ವತಂತ್ರ ಅಭ್ಯರ್ಥಿಗಳು - 119
ಒಟ್ಟು - 581

2018 vs 2023 ಚುನಾವಣೆಗಳಲ್ಲಿ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳು

2018 - 15%
2023 - 22%

ಪಕ್ಷಗಳಲ್ಲಿ ಶೇಕಡವಾರು ಅಪರಾಧ ಪ್ರಕರಣಗಳು

INC - 55%
ಬಿಜೆಪಿ - 43%
JD(S) - 34%
AAP - 23%

(ಮೇ 3, 2023 ರಂದು ಬಿಡುಗಡೆಯಾದ ಎಡಿಆರ್ ವರದಿಯ ಡೇಟಾ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com