ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಸೋಲಿಸಿ ಸುಮಲತಾ ಗೆಲ್ಲಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

2019ರ ಲೋಕಸಭೆ ಚುನಾವಣೆ ಮುಗಿದು ಈಗ 2023ರ ವಿಧಾನಸಭೆ ಚುನಾವಣೆ ಬಂದರೂ ಅಂದಿನ ಚುನಾವಣಾ ಸಂದರ್ಭದ ಬಗ್ಗೆ ರಾಜಕೀಯ ನಾಯಕರ ಮಾತುಗಳು ಮಾತ್ರ ನಿಂತಿಲ್ಲ. ಜೆಡಿಎಸ್ ಅಂದಿನ ಸೋಲಿನ ಕಹಿಯನ್ನೂ ಇನ್ನೂ ಮರೆತಿಲ್ಲ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮಂಡ್ಯ: 2019ರ ಲೋಕಸಭೆ ಚುನಾವಣೆ ಮುಗಿದು ಈಗ 2023ರ ವಿಧಾನಸಭೆ ಚುನಾವಣೆ ಬಂದರೂ ಅಂದಿನ ಚುನಾವಣಾ ಸಂದರ್ಭದ ಬಗ್ಗೆ ರಾಜಕೀಯ ನಾಯಕರ ಮಾತುಗಳು ಮಾತ್ರ ನಿಂತಿಲ್ಲ. ಜೆಡಿಎಸ್ ಅಂದಿನ ಸೋಲಿನ ಕಹಿಯನ್ನೂ ಇನ್ನೂ ಮರೆತಿಲ್ಲ. ಅಂದು ಕಾಂಗ್ರೆಸ್, ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಿದ್ದು ರಹಸ್ಯವಾಗಿಯೇನು ಉಳಿದಿಲ್ಲ.

ಈ ಬಗ್ಗೆ ಇಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯನವರೇ ಮಾತನಾಡಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆ ವೇಳೆ ಚಲುವರಾಯಸ್ವಾಮಿ, ನರೇಂದ್ರ, ಶಿವಣ್ಣ ಎಲ್ಲರಿಗೂ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಜನರು ನಮ್ಮ ಮಾತು ಕೇಳಲ್ಲ ಸರ್ ಅಂದುಬಿಟ್ರು. ಆಯಮ್ಮನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ ನನಗೆ ಈಗ ಅನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಬೀದಿ ಬೀದಿಯಲ್ಲಿ ಭ್ರಷ್ಟಚಾರದ ವಿಚಾರ ಚರ್ಚೆಯಾಗ್ತಿದೆ. ವಿಧಾನಸೌಧದ ಪ್ರತಿಗೋಡೆಗಳೂ ದುಡ್ಡು ದುಡ್ಡು ಅನ್ನುತ್ತಿವೆ. ಇಂತಹ 40 ಪರ್ಸೆಂಟ್ ಸರ್ಕಾರ ಇರಬೇಕಾ? ಮೋದಿ ಅಚ್ಚೇದಿನ್ ಆಯೇಗಾ ಅಂತಾರಲ್ಲ, ನಿಮಗೇನಾದ್ರು ಅಚ್ಚೇ ಬಂತೇನ್ರಪ್ಪ.? ಎಂದು ಪ್ರಶ್ನಿಸಿದ್ದಾರೆ. 

ನಾಗಮಂಗಲ ಜನತೆ ತುಂಬಾ ಸಜ್ಜನರಿದ್ದಾರೆ. ನಿಮ್ಮ ಉತ್ಸಾಹ ನೋಡಿದ್ರೆ ನಮ್ಮ ಅಭ್ಯರ್ಥಿ ಚಲುವರಾಯಸ್ವಾಮಿ ಗೆಲ್ಲೋದು ಸೂರ್ಯ ಚಂದ್ರರಷ್ಟೇ ಸತ್ಯ ಅನ್ನಿಸುತ್ತಿದೆ. ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಕೂಡ ಒಬ್ಬರು. ಚೆಲುವರಾಯಸ್ವಾಮಿಗೆ ನಾಯಕತ್ವದ ಗುಣ ಇದೆ. ಅಂತಹವರನ್ನ ನೀವು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದ್ದಾರೆ.

ಅತಂತ್ರ ಬರಲಿ ಅಂತಾ ಕಾಯ್ತಿದ್ದಾರೆ: ಇದೇ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಜೆಡಿಎಸ್‌ನವರು ಅವಕಾಶವಾದಿಗಳು. ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ. ಯಾವುದೇ ಪೂರ್ಣ ಪ್ರಮಾಣದ ಸರ್ಕಾರ ಬರದಿರಲಿ ಅಂತಾ ನಿತ್ಯವೂ ಹೋಮ, ಹವನ, ಪೂಜೆ ಮಾಡ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com