ಹಾಸನ: ಭದ್ರಕೋಟೆ 'ಕೈ ಜಾರುವ' ಆತಂಕದಲ್ಲಿ ದಳಪತಿಗಳು; 'ನಿಷ್ಠೆ' ಬದಲಾಯಿಸುತ್ತಿದ್ದಾರಾ ಮತದಾರ ಪ್ರಭುಗಳು!
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದೇ ರೀತಿ ಈಗಾಗಲೇ ಚುನಾವಣೆ ಪೂರ್ವ ಸಮೀಕ್ಷೆಗಳು ಕೂಡ ಹೊರಬಿದ್ದಿವೆ. ಹಾಗಾದರೆ ಜೆಡಿಎಸ್ ಭದ್ರಕೋಟೆ ಆಗಿರುವ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ರಾಜಕೀಯ ವಾತವಾರಣ ಹೇಗಿದೆ ನೋಡೋಣ.
Published: 06th May 2023 10:08 AM | Last Updated: 06th May 2023 03:09 PM | A+A A-

ದೇವೇಗೌಡ, ಎಚ್ ಡಿಕೆ ಮತ್ತು ರೇವಣ್ಣ
ಹಾಸನ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದೇ ರೀತಿ ಈಗಾಗಲೇ ಚುನಾವಣೆ ಪೂರ್ವ ಸಮೀಕ್ಷೆಗಳು ಕೂಡ ಹೊರಬಿದ್ದಿವೆ. ಹಾಗಾದರೆ ಜೆಡಿಎಸ್ ಭದ್ರಕೋಟೆ ಆಗಿರುವ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ರಾಜಕೀಯ ವಾತವಾರಣ ಹೇಗಿದೆ ನೋಡೋಣ.
1962 ಮತ್ತು 1967ರಲ್ಲಿ ಎಚ್‌ಡಿ ದೇವೇಗೌಡ ಸತತ ಎರಡು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದಾಗ ನಾವು ಅವರ ಸೈಕಲ್ ಚಿಹ್ನೆ ಮತ ಹಾಕಿದ್ದೆವು. ಈ ಚಿಕ್ಕ ಗುಡ್ಡಗಾಡು ಪ್ರದೇಶದ ವ್ಯಕ್ತಿಯೊಬ್ಬರು ನವದೆಹಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು ಇತಿಹಾಸ.
ದೇವೇಗೌಡರು ಹಾಸನ ಜಿಲ್ಲೆಗಾಗಿ ತುಂಬಾ ಕೆಲಸ ಮಾಡಿದ್ದಾರೆ. ಮುಂದಿನ ಪೀಳಿಗೆಯ ರಾಜಕಾರಣಿಗಳು ಬಂದರೂ ಗೌಡರು ಮತ್ತು ಅವರ ಪಕ್ಷದ ಮೇಲಿನ ನಮ್ಮ ನಿಷ್ಠೆ ಬದಲಾಗುವುದಿಲ್ಲ ಎಂದು ಹರದನಹಳ್ಳಿ ನಿವಾಸಿ 78 ವರ್ಷದ ಸುಬ್ರಾಯ ಗೌಡ ಹೇಳುತ್ತಾರೆ.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹರದನಹಳ್ಳಿಯಲ್ಲಿ ಹಳ್ಳಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಹಲವು ವರ್ಷಗಳಿಂದ ಅವರು ಹಾಸನ ಜಿಲ್ಲೆಯಲ್ಲಿ ಜನತಾ ಪಕ್ಷಕ್ಕೆ ಮತ್ತು ಈಗ ಜೆಡಿಎಸ್‌ಗೆ ಅಸಾಧಾರಣ ರಾಜಕೀಯ ನೆಲೆಯನ್ನು ನಿರ್ಮಿಸಿದ್ದಾರೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೆ, ಹಾಸನ ಕ್ಷೇತ್ರ ಬಿಜೆಪಿಗೆ ಸೇರಿದ್ದು, ಪ್ರೀತಂ ಜೆ ಗೌಡ ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಸೋಲನ್ನು ನೋಡಿದ ಬಳಿಕವೇ ನನಗೆ ತೃಪ್ತಿ: ಎಚ್‌ಡಿ ದೇವೇಗೌಡ
ದೇವೇಗೌಡರು ತಮ್ಮ 90ನೇ ವಯಸ್ಸಿನಲ್ಲಿಯೂ ಅನಾರೋಗ್ಯದ ನಡುವೆಯೂ ಗುರುವಾರ ಸಂಜೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಚ್‌ಪಿ ಸ್ವರೂಪ್ ಪರ ಮತಯಾಚನೆ ನಡೆಸಿದರು. ಕೃಷಿ ಆಧಾರಿತ ಜಿಲ್ಲೆಯಲ್ಲಿ ಒಕ್ಕಲಿಗರು, ಮುಸ್ಲಿಮರು, ಎಸ್‌ಸಿಗಳು ಮತ್ತು ಒಬಿಸಿಗಳು ಪ್ರಾಬಲ್ಯ ಹೊಂದಿದ್ದು, ಲಿಂಗಾಯತರು ಅಲ್ಪ ಪ್ರಮಾಣದಲ್ಲಿದ್ದಾರೆ.
ಯುವ ಶಾಸಕರಾಗಿರುವ ಪ್ರೀತಂ ಗೌಡ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಬಾರಿ ತಮ್ಮ ಅಭ್ಯರ್ಥಿ ಆಯ್ಕೆಯಾಗಲಿದ್ದಾರೆ ಎಂದು ಹಾಸನ ಪಟ್ಟಣದ ಸಾಲಗಾಮೆ ರಸ್ತೆಯಲ್ಲಿ ಸೈಕಲ್ ಅಂಗಡಿ ನಡೆಸುತ್ತಿರುವ ವಾಸಿಂ ಪಾಷಾ ಹೇಳುತ್ತಾರೆ.
ಪಾಷಾ ಅವರ ನೆರೆಹೊರೆಯವರಾದ ಎನ್.ಎಸ್.ನರಸಿಂಹ ಮೂರ್ತಿ ಕೂಡ ಪ್ರೀತಂ ಅವರನ್ನು ಬೆಂಬಲಿಸಿದ್ದಾರೆ, ಪ್ರೀತಂ ಅವರು ಮೊದಲ ಬಾರಿಗೆ ಶಾಸಕರಾಗಿ ಅನೇಕ ಕೆಲಸ ಮಾಡಿದ್ದಾರೆ, ಹೀಗಾಗಿ ತಮ್ಮ ಎರಡನೇ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎಂಬ ಭರವಸೆ ಇದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಪ್ರೀತಂ ಅವರು ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿದರು, ಸಿದ್ದಯ್ಯನಗರ ಕೊಳೆಗೇರಿಯಲ್ಲಿ ಮನೆಗಳನ್ನು ನಿರ್ಮಿಸಿದರು ಮತ್ತು ಹೊಸ ಒಳಚರಂಡಿ ಮಾರ್ಗಗಳು ಮತ್ತು ಕಾಂಕ್ರೀಟ್ ರಸ್ತೆಗಳನ್ನು ಹಾಕಿದ್ದಾರೆ ಹೀಗಾಗಿ ಈ ಬಾರಿ ನಮ್ಮ ಮತ ಪ್ರೀತಂ ಅವರಿಗೆ ಎಂಬುದು ಅವರ ಮಾತು.
ಸ್ವರೂಪ್ ಕೂಡ ಉತ್ಸಾಹಭರಿತ ಹೋರಾಟ ಮಾಡುತ್ತಿದ್ದಾರೆ. ಪ್ರೀತಂ ಮತ್ತು ಸ್ವರೂಪ್ ಇಬ್ಬರೂ ಮುಳ್ಳು ಒಕ್ಕಲಿಗ ಉಪಪಂಗಡಕ್ಕೆ ಸೇರಿದವರು, ದೇವೇಗೌಡರು ದಾಸ ಒಕ್ಕಲಿಗರು. ದೇವೇಗೌಡರ ಪ್ರಾಬಲ್ಯ ಇಲ್ಲಿ ಸಮೀಕರಣಗಳನ್ನು ಬದಲಾಯಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಹಾಸನದಿಂದ 40 ಕಿ.ಮೀ ದೂರದಲ್ಲಿರುವ ಸಕಲೇಶಪುರವನ್ನು ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಬೇಲೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬೇಲೂರು ಕ್ಷೇತ್ರದ ಜಾವಗಲ್‌ನಿಂದ ಇಂದಿರಾಬಾಯಿ ಮಾತನಾಡಿ, ಇಷ್ಟು ವರ್ಷ ಹೆಚ್ಚಿನ ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ, ಆದರೆ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ, ಏಕೆಂದರೆ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಜನ ಈ ಬಾರಿ ಬಿಜೆಪಿಗೆ ಅವಕಾಶ ನೀಡಬೇಕೆಂದು ಬಯಸುತ್ತಿದ್ದಾರೆ ಎಂದಿದ್ದಾರೆ.
ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಕಷ್ಟವಾಗಬಹುದು. ಅರಸೀಕೆರೆಯಲ್ಲಿಯೂ ಜೆಡಿಎಸ್ ನ ತೆನೆ ಹೊತ್ತ ಮಹಿಳೆ ಜಾದೂ ಮಾಡದಿರಬಹುದು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಶಾಸಕ ಶಿವಲಿಂಗೇಗೌಡ ಮನೆಮನೆಗೆ ತಿರುಗಿ ಪ್ರಚಾರ ಮಾಡುತ್ತಿದ್ದಾರೆ.
2008ರ ಮೊದಲು ಇದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಜೆಡಿಎಸ್ ನಿಂದ ಶಿವಲಿಂಗೇಗೌಡ ಗೆದ್ದಿದ್ದರು. ಈ ವರ್ಷ, ಈಗ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಹೆಚ್ಚಿನ ಮತಗಳನ್ನು ಗಳಿಸಲಿದ್ದಾರೆ ಎಂದು ಸ್ಥಳೀಯ ನಿವಾಸಿ ಶ್ರೀಧರ್ ಎಂಬುವರು ಹೇಳಿದರು.
ಆದರೆ ಹೊಳೆನರಸೀಪುರ, ಅರಕಲಗೂಡು, ಶ್ರವಣಬೆಳಗೊಳ ಎಲ್ಲ ಕಡೆಯೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಹಾಸನ ಜಿಲ್ಲೆಗೆ ದೇವೇಗೌಡರು ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ನಾವು ಇಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಮತ ಹಾಕುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ ಎಂದು ಅರಕಲಗೂಡಿನ ರೈತ ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೇ 18ಕ್ಕೆ ದೇವೇಗೌಡರ ಹುಟ್ಟುಹಬ್ಬ: ಹಾಸನ ಪೂರ್ತಿ ಗೆಲ್ಲಿಸಿ ಅಪ್ಪಾಜಿ ಪಾದದಡಿಗೆ ಇಡುತ್ತೇವೆ- ಭವಾನಿ ರೇವಣ್ಣ
ದೇವೇಗೌಡರ ಪುತ್ರ ಎಚ್‌ಡಿ ರೇವಣ್ಣ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. 1989ರಲ್ಲಿ ಹೊಳೆನರಸೀಪುರದಲ್ಲಿ ದೇವೇಗೌಡರನ್ನು ಸೋಲಿಸಿದ್ದ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದಾರೆ. ರೇವಣ್ಣ ಅವರು ಕ್ಷೇತ್ರದಲ್ಲಿ ಗಟ್ಟಿಯಾದ ಹಿಡಿತ ಹೊಂದಿದ್ದರೂ ಈ ಬಾರಿ ಅಬ್ಬರದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಹರದನಹಳ್ಳಿಯ ರವಿ ಹೇಳಿದ್ದಾರೆ.
2018 ರ ಚುನಾವಣೆಯಲ್ಲಿ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳು ಒಟ್ಟು 5.69 ಲಕ್ಷ ಮತಗಳನ್ನು ಪಡೆದರು, ಕಾಂಗ್ರೆಸ್ 3.76 ಲಕ್ಷ ಮತ್ತು ಬಿಜೆಪಿ 2.04 ಲಕ್ಷ ಮತ ಪಡೆದಿತ್ತು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಅಭ್ಯರ್ಥಿಯಾಗಿ 6 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಈ ಬಾರಿ ಸಮೀಕರಣ ಬದಲಾಗಬಹುದು ಎಂದು ಹೇಳಲಾಗಿದೆ.