ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಣತಂತ್ರ!
ಮೇ 10 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಮುಂದಿನ ಸರ್ಕಾರ ರಚನೆಗೆ ರಣತಂತ್ರ ರೂಪಿಸುತ್ತಿವೆ.
Published: 12th May 2023 10:19 AM | Last Updated: 12th May 2023 02:50 PM | A+A A-

ವಿಧಾನಸೌಧ
ಬೆಂಗಳೂರು: ಮೇ 10 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಮುಂದಿನ ಸರ್ಕಾರ ರಚನೆಗೆ ರಣತಂತ್ರ ರೂಪಿಸುತ್ತಿವೆ.
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸುಳಿವು ನೀಡಿದ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಸರ್ಕಾರ ರಚಿಸಲು ಅಥವಾ ಅದರ ಭಾಗವಾಗಲು ಅನುಕೂಲಕರ ಸ್ಥಾನದಲ್ಲಿರಲು ಆಶಿಸುತ್ತಿವೆ.
ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಪರವಾದ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ, ಪ್ರತಿಪಕ್ಷ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬಿಜೆಪಿ ಕೂಡ ಎಕ್ಸಿಟ್ ಪೋಲ್‌ಗಳು ತನ್ನ ಪರವಾಗಿ ಇಲ್ಲದಿದ್ದರೂ ತಾನೇ ಸರ್ಕಾರ ರಚಿಸುವ ವಿಶ್ವಾಸ ಹೊರಹಾಕುತ್ತಿದೆ. ಆದರೆ ಶನಿವಾರ ಫಲಿತಾಂಶ ಪ್ರಕಟವಾದ ನಂತರ ನಿಜವಾದ ಚಿತ್ರಣ ಹೊರಬೀಳಲಿದೆ.
ಕಾಂಗ್ರೆಸ್ ನಾಯಕರು ಸಭೆ ಸೇರಿ ಚರ್ಚಿಸುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಫಲಿತಾಂಶವನ್ನು ಪರಿಗಣಿಸಿ ತಂತ್ರಗಳನ್ನು ಹೆಣೆಯುವಲ್ಲಿ ನಿರತವಾಗಿವೆ. ಮ್ಯಾಜಿಕ್ ನಂಬರ್(113 ಸ್ಥಾನ)ಗಿಂತ ಕಡಿಮೆ ಬಂದರೆ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಯನ್ನು ಬಿಜೆಪಿ ತಳ್ಳಿ ಹಾಕುತ್ತಿಲ್ಲ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದು, ಮುಂದಿನ ಸರ್ಕಾರ ರಚನೆಗೆ ವಿವಿಧ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುರ್ಜೇವಾಲಾ ಅವರು ಸಿದ್ದರಾಮಯ್ಯ ಜೊತೆ ಚರ್ಚಿಸಿದ ನಂತರ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿರುವ ಡಿಕೆ ಶಿವಕುಮಾರ್ ಸೇರಿದಂತೆ ನಾಯಕರೊಂದಿಗೆ ವರ್ಚುವಲ್ ಸಭೆ ನಡೆಸಿದರು.
ಇದನ್ನು ಓದಿ: ಚುನಾವಣಾ ಫಲಿತಾಂಶಕ್ಕೆ ಸಿದ್ಧತೆ: ರಾಜ್ಯಾದ್ಯಂತ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ 3 ಹಂತದ ಬಿಗಿ ಭದ್ರತೆ
ಒಂದು ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ಮ್ಯಾಜಿಕ್ ನಂಬರ್ ಗಿಂತ 4-5 ಸ್ಥಾನಗಳು ಕಡಿಮೆ ಬಂದರೆ, ಖಚಿತವಾಗಿ ಗೆಲ್ಲಬಹುದಾದ ಪಕ್ಷೇತರರು ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳನ್ನು ಸೆಳೆಯಲು ಯೋಚಿಸುತ್ತಿದೆ. ಗೌರಿಬಿದನೂರಿನ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿಗೌಡ ಮತ್ತು ರಾಣೆಬೆನ್ನೂರಿನ ಎನ್‌ಸಿಪಿ ಅಭ್ಯರ್ಥಿ ಆರ್ ಶಂಕರ್ ಅವರು ಗೆಲ್ಲುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಅವರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
"ಕಾಂಗ್ರೆಸ್ ಸರ್ಕಾರ ರಚಿಸಲು ಸಿದ್ಧವಾಗಿದೆ ಮತ್ತು ಅಗತ್ಯಬಿದ್ದರೆ ಬಿಜೆಪಿಯ ಆಪರೇಷನ್ ಕಮಲದಿಂದ ತನ್ನ ಶಾಸಕರನ್ನು ರಕ್ಷಿಸಲು ರೆಸಾರ್ಟ್‌ಗೆ ಸ್ಥಳಾಂತರಿಸಬಹುದು" ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲು ವಿಫಲವಾದರೆ, ಬಿಜೆಪಿ ತಮ್ಮ ಶಾಸಕರನ್ನು ಖರೀದಿಸಲು ಮುಂದಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಸ್ವಂತ ಬಲದಿಂದ ಸ್ಪಷ್ಟ ಬಹುಮತ ಗಳಿಸದಿದ್ದರೂ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿ ಸರ್ಕಾರ ರಚಿಸುತ್ತದೆ, ಜೆಡಿಎಸ್ ಜೊತೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದ ಅಭ್ಯರ್ಥಿಗಳೊಂದಿಗೆ ವಿವಿಧ ಪರ್ಯಾಯ ಮಾರ್ಗಗಳ ಕುರಿತು ಮಾತನಾಡಿದ್ದು, ಬುಧವಾರ ಮತದಾನ ಮುಗಿದ ತಕ್ಷಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ.