ರಾಜ್ಯದಲ್ಲಿ ಭರ್ಜರಿ ಗೆಲುವು: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ಕಾಂಗ್ರೆಸ್ ಮುಂದಿನ ಗುರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರವು 2024ರಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ತನ್ನ ಕಣ್ಣಿಟ್ಟಿದ್ದು, ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ.
Published: 28th May 2023 11:26 AM | Last Updated: 29th May 2023 07:37 PM | A+A A-

ಕಾಂಗ್ರೆಸ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರವು 2024ರಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ತನ್ನ ಕಣ್ಣಿಟ್ಟಿದ್ದು, ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ.
2019ರ ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್, ಇದೀಗ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಕಾಂಗ್ರೆಸ್, ದಕ್ಷಿಣ ಭಾರತದಲ್ಲಿ ಕೇಸರಿ ಪಕ್ಷಕ್ಕಿದ್ದ ಏಕೈಕ ಮಾರ್ಗದ ಬಾಗಿಲನ್ನು ಮುಚ್ಚಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ, ಸಂಪುಟ ಸಚಿವ ಡಾ. ಶರಣಪ್ರಕಾಶ ಪಾಟೀಲ್, ರಾಜ್ಯದಲ್ಲಿನ ಎಲ್ಲಾ ಸ್ಥಾನಗಳಲ್ಲಿ ಸೆಣಸಲು ಪಕ್ಷವು ಸರ್ವಪ್ರಯತ್ನ ನಡೆಸಲಿದೆ. ಜನರ ಭಾವನೆಗಳು ಬದಲಾಗಿವೆ. ಕಾಂಗ್ರೆಸ್ ಈ ಬಾರಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.
ದಲಿತ ಸಮುದಾಯಕ್ಕೆ ಗರಿಷ್ಠ ಒಂಬತ್ತು ಕ್ಯಾಬಿನೆಟ್ ಸ್ಥಾನಗಳನ್ನು ನೀಡಲಾಗಿದೆ, ಲಿಂಗಾಯತರಿಗೆ ಏಳು ಮತ್ತು ಒಕ್ಕಲಿಗರಿಗೆ ಐದು ಸಚಿವ ಸ್ಥಾನಗಳನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ವಿವರಿಸುತ್ತವೆ. ಇದಲ್ಲದೆ ಒಬಿಸಿ ಮತ್ತು ಎಸ್ಟಿ ಸಮುದಾಯದ ಏಳು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಕ್ಷವು ಮುಸ್ಲಿಮರಿಗೆ ಎರಡು ಕ್ಯಾಬಿನೆಟ್ ಹುದ್ದೆಗಳನ್ನು ಮತ್ತು ಕ್ರಿಶ್ಚಿಯನ್, ಜೈನ ಮತ್ತು ಬ್ರಾಹ್ಮಣ ಸಮುದಾಯಗಳಿಗೆ ತಲಾ ಒಂದನ್ನು ನೀಡಿದೆ.
ಇದನ್ನೂ ಓದಿ: ಗೆದ್ದಾಯ್ತು ವಿಧಾನಸಭೆ ಚುನಾವಣೆ; ಕಾಂಗ್ರೆಸ್ ಮುಂದಿದೆ 'ಮಿನಿ ಮಹಾಸಮರ' ಜಯಿಸುವ ಹೊಣೆ!
ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದ 15 ದಿನಗಳಲ್ಲೇ ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಸ್ಥಿರ ಮತ್ತು ಸ್ವಚ್ಛ ಆಡಳಿತ ನೀಡಲು ಜನರು ನಮಗೆ ಮತ ನೀಡಿದ್ದು, ಜನರ ಆಶೋತ್ತರಗಳನ್ನು ಈಡೇರಿಸುತ್ತೇವೆ. ನಾವು ನೀಡಿರುವ ಭರವಸೆಯನ್ನು ಈಡೇರಿಸುವ ಮೊದಲ ಹೆಜ್ಜೆಯಾಗಿ ಭಿನ್ನಾಭಿಪ್ರಾಯಗಳಿಲ್ಲದೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿಯನ್ನು ಗುರಿಯಾಗಿಸಿಕೊಂಡ ಸಿದ್ದರಾಮಯ್ಯ ಅವರು, 'ಓರ್ವ ವ್ಯಕ್ತಿಯ ಸರ್ಕಾರ'ದಿಂದ ಜನರು ಅಸಹ್ಯಗೊಂಡಿದ್ದಾರೆ ಮತ್ತು ಮುಖ್ಯಮಂತ್ರಿಯೊಬ್ಬರು ಸಂಪುಟ ವಿಸ್ತರಣೆಗಾಗಿ ಪದೇ ಪದೆ ದೆಹಲಿಗೆ ಪ್ರವಾಸ ಮಾಡುತ್ತಿದ್ದ ಅಸಹಾಯಕತೆಯನ್ನು ಜನ ನೋಡಿದ್ದಾರೆ. ಅವರು ಹೈಕಮಾಂಡ್‌ನೊಂದಿಗೆ ಹಲವಾರು ಸಭೆಗಳನ್ನು ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ಇಂದು ಅವರು ದಿಟ್ಟ, ಪೂರ್ಣ ಪ್ರಮಾಣದ ಮತ್ತು ಸ್ಥಿರ ಸರ್ಕಾರಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
2-3 ಸ್ಥಾನಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಅವಧಿ ಮುಗಿಯುವವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಹಾದಿಯಿಂದ ಸಿದ್ದರಾಮಯ್ಯ ಈ ಬಾರಿ ದೂರ ಸರಿದಿದ್ದು, ಎಲ್ಲ 34 ಸ್ಥಾನಗಳನ್ನು ಭರ್ತಿ ಮಾಡಿರುವುದು ಅವರ ಆತ್ಮವಿಶ್ವಾಸ ಮತ್ತು ದೃಢತೆಯನ್ನು ಬಿಂಬಿಸುತ್ತದೆ. ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ವಿವರಿಸುತ್ತಾರೆ.
ಇದನ್ನೂ ಓದಿ: ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ; ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ: ಕುಮಾರಸ್ವಾಮಿ
ಕಾಂಗ್ರೆಸ್ ಸರ್ಕಾರದ ದುರಹಂಕಾರ ಈಗಾಗಲೇ ಗೋಚರಿಸುತ್ತಿದೆ. 'ಕಾಂಗ್ರೆಸ್ ಅನುಸರಿಸುತ್ತಿರುವ ದ್ವೇಷದ ರಾಜಕಾರಣ ಲೋಕಸಭೆ ಚುನಾವಣೆಯ ಹೊತ್ತಿಗೆ ಕೊನೆಗೊಳ್ಳಲಿದೆ. ಕ್ಯಾಬಿನೆಟ್ ಸಚಿವರು ದ್ವೇಷ ಮತ್ತು ರಾಜಕೀಯ ಪೈಪೋಟಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಅಭಿವೃದ್ಧಿಗಿಂತ ದ್ವೇಷವನ್ನು ಆರಿಸಿಕೊಂಡಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಇನ್ನು ಕೆಲವೇ ತಿಂಗಳಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ ಪ್ರಬಲ ನಾಯಕತ್ವದೊಂದಿಗೆ ಕಾಂಗ್ರೆಸ್ ಸಿದ್ಧವಾಗಿದ್ದರೂ, ಕೇಸರಿ ಪಾಳೆಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸುವ ನಾಯಕನ ಹುಡುಕಾಟದಲ್ಲಿ ತೊಡಗಿಕೊಂಡಿದೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಈ ರಾಜ್ಯದವರೇ ಆಗಿದ್ದು, ಕರ್ನಾಟಕದ ಭೂಮಿಪುತ್ರ ಎಂಬ ಅವರ ಮನವಿ ಜನರ ಮನಸೂರೆಗೊಂಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಇದೀಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಖರ್ಗೆ ಅವರ ಮಟ್ಟಕ್ಕೆ ನಿಲ್ಲುವ ಮಾಸ್ ಲೀಡರ್ ಸದ್ಯ ಬಿಜೆಪಿಯಲ್ಲಿಲ್ಲ. ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಇನ್ನೂ ಆಯ್ಕೆ ಮಾಡಿಲ್ಲ.
ಇದನ್ನೂ ಓದಿ: ಅಳೆದು-ತೂಗಿ ಸಚಿವ ಸಂಪುಟ ರಚನೆ ಲೆಕ್ಕಾಚಾರ: ಲೋಕಸಭೆ ಚುನಾವಣೆ ದೃಷ್ಟಿಯಿಂದ ಜನಪ್ರಿಯ ಶಾಸಕರಿಗಷ್ಟೇ ಮಣೆ!
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಹಿಂದುತ್ವದ ಮೇಲೆ ಚುನಾವಣೆಯನ್ನು ಎದುರಿಸುವ ಬಿಜೆಪಿಯ ಆಶಯಕ್ಕೆ ಹಿನ್ನಡೆಯಾಗಿದ್ದು, ವಿಶ್ವಾಸದಿಂದ ಮುನ್ನಡೆಯುತ್ತಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಮಾರ್ಪಡಿಸಿಕೊಳ್ಳುವ ಹೆಬ್ಬಯಕೆಯಿಂದ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ 2024ರ ಸಂಸತ್ ಚುನಾವಣೆಯಲ್ಲಿ ಈ ಹಿಂದೆ ಗೆದ್ದ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಬಿಜೆಪಿಗೆ ಸವಾಲಿನ ಕೆಲಸವಾಗಿದೆ.