ಗ್ಯಾರಂಟಿ ಬಗ್ಗೆ ಗಡುವು ನೀಡಲು ಅವರು ಯಾರು? ಮೊದಲು ನಿಮ್ಮ ಬೆನ್ನು ನೋಡಿಕೊಳ್ಳಿ: ಪ್ರತಾಪ್ ಸಿಂಹಗೆ ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ಸರ್ಕಾರ ಜೂನ್ 1ರಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದಿದ್ದರೇ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕಾಂಗ್ರೆಸ್ ಸೋಮವಾರ ತಿರುಗೇಟು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕಾಂಗ್ರೆಸ್ ಸರ್ಕಾರ ಜೂನ್ 1ರಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದಿದ್ದರೇ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕಾಂಗ್ರೆಸ್ ಸೋಮವಾರ ತಿರುಗೇಟು ನೀಡಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು, ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಭರವಸೆಗಳನ್ನು ಜಾರಿಗೊಳಿಸುವಂತೆ ಗಡುವು ನೀಡುವ ನೈತಿಕ ಹಕ್ಕು ಪ್ರತಾಪ್ ಸಿಂಹ ಅವರಿಗಿಲ್ಲ ಎಂದು ಹೇಳಿದರು.

ಪ್ರತಾಪ್ ಸಿಂಹ ಅವರು ಮೊದಲು ತಮ್ಮ ಬೆನ್ನು ನೋಡಿಕೊಳ್ಳಲಿ ಎಂದರು. ಇದೇ ವೇಳೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸದಿರುವುದನ್ನು ಪಟ್ಟಿಮಾಡಿದರು.

“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳ ಸೃಷ್ಟಿಸುವ ಭರವಸೆ ನೀಡಿತ್ತು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ಮತ್ತು 150 ಸ್ಮಾರ್ಟ್ ಸಿಟಿಗಳ ಭರವಸೆ ನೀಡಿತ್ತು. ಈ ಎಲ್ಲಾ ಭರವಸೆಗಳ ಕತೆ ಏನಾಯಿತು ಎಂದು ಪ್ರಶ್ನಿಸಿದರು.

ಮೈಸೂರಸಲ್ಲಿ ರೈಲ್ವೇ ಟರ್ಮಿನಲ್, ಮೈಸೂರು-ಕುಶಾನಗರ ರೈಲ್ವೇ ಯೋಜನೆ, ಮೈಸೂರು ಏರ್ ಪೋರ್ಟ್ ವಿಸ್ತರಣೆ, ಕಡಕೊಳದಲ್ಲಿ ಕೈಗಾರಿಕೆ ಸ್ಥಾವನೆ ಭರವಸೆಗಳನ್ನೇಕೆ ಈಡೇರಿಸಿಲ್ಲ? ಜೂ.1ರ ಬೆಳಿಗ್ಗೆ 11ಕ್ಕೆ ಸಂಸದರ ಕಚೇರಿಗೆ ಹೋಗುತ್ತೇನೆ. ಈ ಭರವಸೆಗಳಿಗೆ ಉತ್ತರ ಕೊಡಲೇಬೇಕು ಎಂದು ಆಗ್ರಹಿಸಿದರು.

ವಿ.ಸೋಮಣ್ಣ ಅವರನ್ನು ಬಲಿಪಶು ಮಾಡಿದರು. ಲಿಂಗಾಯತ ಸಮುದಾಯ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. 2024ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರನ್ನು ಎರಡೂವರೆ ಲಕ್ಷ ಅಂತರದಲ್ಲಿ ಸೋಲಿಸುತ್ತಾರೆ. ಪ್ರತಾಪ್ ಸಿಂಹ ಒಬ್ಬಂಟಿಯಾಗಿದ್ದಾರೆಂದು ಕುಟುಕಿದರು.

ಬಳಿಕ ಅಡ್ಡಂಡ ಕಾರ್ಯಪ್ಪ ವಿರುದ್ದ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಮೈಸೂರಿನಲ್ಲಿ ನಿಮ್ಮದು ಏನು‌ ನಡೆಯಲ್ಲ. ಏನಾದರೂ ಮಾಡಿದರೆ ರೌಡಿ ಶೀಟರ್ ತೆರೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಿಂದೆ ಆತನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ದೂರು ಏನಾಗಿದೆ? ಕೂಡಲೇ ಎಫ್ ಐ ಆರ್ ದಾಖಲಿಸಿ ಎಂದು ಆಗ್ರಹಿಸಿರು.

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ, ಜೆಡಿಎಸ್ ಜೋಕರ್ ಪಕ್ಷ. ಅದನ್ನು ಮುಗಿಸಲು ಬಿಜೆಪಿ ಕಾರಣ. ಅದಕ್ಕೆ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೆಡಿಎಸ್ ವಿಸರ್ಜನೆ ಏಕೆ ಮಾಡಿಲ್ಲ? ಮೈ ಕೈ ಪರಚಿಕೊಳ್ಳುವುದನ್ನು ಬಿಟ್ಟು ವಿಸರ್ಜನೆ‌ ಮಾಡಿ. 19 ಶಾಸಕರನ್ನು ಉಳಿಸಿಕೊಳ್ಳುವುದನ್ನು ಮಾಡಿ. 10 ರಿಂದ 12 ಜನ ಜೆಡಿಎಸ್‌ ನಿಂದ‌ ಹೊರ ಹೋಗಲು ಮುಂದಾಗಿದ್ದಾರೆ. ಜೆಡಿಎಸ್ ಕಥೆ ಮುಗಿದಿದೆ ಜೆಡಿಎಸ್ ಮುಗಿದ ಅಧ್ಯಾಯ. ಜೆಡಿಎಸ್‌ ಅನ್ನು ಮುಂದೆ ಯಾರು ನಂಬುವುದಿಲ್ಲ ಎಂದು ಹೇಳಿದರು.

ಅಶ್ವಥ್ ನಾರಾಯಣ್ ವಿರುದ್ದ ಎಫ್‌ ಐಆರ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೂಡಲೇ ಅಶ್ವತ್ಥ್ ನಾರಾಯಣ್ ಅವರನ್ನು ಬಂಧಿಸಬೇಕು. 24 ಗಂಟೆಯಲ್ಲಿ ಅಶ್ವಥ್ ನಾರಾಯಣ್ ಬಂಧಿಸದಿದ್ದರೆ ಐಜಿ ಕಚೇರಿ ಮುಂದೆ ಪ್ರತಿಭಟನೆ. ಪೊಲೀಸರ ಆಟ ಮುಂದೆ ನಡೆಯಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದಂತೆ ಮಾಡಬೇಡಿ. ಯಾರ ಪರವಾಗಿ ಯಾರ ಒತ್ತಾಯಕ್ಕೆ ಕೆಲಸ ಮಾಡುವುದನ್ನು ಬಿಡಿ. ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬೇಡಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com