ಸಿಬಿಐ ತನಿಖೆ ವಾಪಸ್ ವಿಚಾರ: ದೆಹಲಿಗೆ ತೆರಳಿದ ಡಿಸಿಎಂ ಡಿಕೆ.ಶಿವಕುಮಾರ್

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ದೆಹಲಿಗೆ ಭೇಟಿ ನೀಡಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಸಿಬಿಐ ತನಿಖೆ ವಾಪಸ್ ವಿಚಾರ ಕುರಿತು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಡಿಸಿಎಂ ಡಿಕೆ.ಶಿವಕುಮಾರ್
ಡಿಸಿಎಂ ಡಿಕೆ.ಶಿವಕುಮಾರ್

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ದೆಹಲಿಗೆ ಭೇಟಿ ನೀಡಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಸಿಬಿಐ ತನಿಖೆ ವಾಪಸ್ ವಿಚಾರ ಕುರಿತು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ತಮ್ಮ ವಿರುದ್ಧದ ಸಿಬಿಐ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ.ಶಿವಕುಮಾರ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿ ನವೆಂಬರ್ 29 ರಂದು ವಿಚಾರಣೆಗೆ ಬರುತ್ತಿದೆ. ಈ ನಡುವಲ್ಲೇ ಡಿಕೆಶಿ ಅವರ ದೆಹಲಿಗೆ ಭೇಟಿ ಮಹತ್ವದ್ದಾಗಿದೆ.

ಈ ನಡುವೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನನ್ನ ವಕೀಲರಾಗಿದ್ದ ಸಿದ್ದಾರ್ಥ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದು, ಅದನ್ನು ಮುಗಿಸಿ ಕರ್ನಾಟಕಕ್ಕೆ ಮರಳುತ್ತೇನೆ‘ ಎಂದು ಹೇಳಿದರು.

ಸಚಿವ ಸಂಪುಟ ತನಿಖೆಗೆ ಅನುಮತಿ ವಾಪಸ್ ಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರ್ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಮುಂದೆ ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದು ಹೇಳಿದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಅಲೆಯಿದೆ
ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಅಲೆ ಇದೆ, ಆದರೆ, ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದ್ದು, ಡಿಸೆಂಬರ್ 9 ರಂದು ನಡೆಯುವ ಮೊದಲ ಸಂಪುಟ ಸಭೆಯಲ್ಲಿ ಎಲ್ಲಾ ಆರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಕರ್ನಾಟಕದಂತೆಯೇ ತೆಲಂಗಾಣದಲ್ಲೂ ಆರು ಗ್ಯಾರಂಟಿ ಭರವಸೆಗಳನ್ನು ನೀಡಿದ್ದೇವೆ. ಕಳೆದ 10 ವರ್ಷಗಳಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವುದು ಸೇರಿದಂತೆ ನೀಡಿದ ಭರವಸೆಗಳನ್ನು ಕೆ ಚಂದ್ರಶೇಖರ ರಾವ್ ಸರ್ಕಾರ ಈಡೇರಿಸಿಲ್ಲ. ತೆಲಂಗಾಣ ರಚನೆಗೆ ಸೋನಿಯಾ ಗಾಂಧಿ ಕಾರಣವಾಗಿದ್ದು, ಜನರು ಅವರಿಗೆ ಋಣಿಯಾಗಿದ್ದಾರೆ ಮತ್ತು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದಾರೆಂದು ತಿಳಿಸಿದರು.

ಇದೇ ವೇಳೆ ಬೋಗಸ್ ಜನತಾ ದರ್ಶನ, ಸರಕಾರ ಈಗ ಎಚ್ಚರವಾಗಿದೆ ಎಂದು ಆರ್.ಆಶೋಕ್ ಮಾಡಿದ ಆರೋಪದ ಕುರಿತು ಮಾತನಾಡಿ, ‘ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೊಸದರಲ್ಲಿ ಜೋರಾಗಿ ಬಟ್ಟೆ ಒಗೆಯಲಿ. ನಾವು ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com